ಕನಕಗಿರಿ | ವರ್ನಖೇಡ ಸರಕಾರಿ ಶಾಲೆಯ ಸಮಸ್ಯೆ ಬಗೆಹರಿಸಲು ಗ್ರಾಮಸ್ಥರಿಂದ ಪ್ರತಿಭಟನೆ

ಕನಕಗಿರಿ : ತಾಲ್ಲೂಕಿನ ಹುಲಿಹೈದರ ಗ್ರಾಮ ಪಂಚಾಯತ್ ವ್ಯಾಪ್ತಿಯ ವರ್ನಖೇಡ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ವಿದ್ಯಾರ್ಥಿಗಳೊಂದಿಗೆ ಇಲ್ಲಿನ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಗ್ರಾಮಸ್ಥರು, ಕಳೆದ ಎರಡು ವರ್ಷಗಳಿಂದ ಶಾಲೆಯಲ್ಲಿ ಕಾಯಂ ಶಿಕ್ಷಕರು ಇಲ್ಲದೆ ಶಾಲಾ ಆಡಳಿತ ಹಾಗೂ ಪಾಠ ಪ್ರವಚನಗಳು ಅತಿಥಿ ಶಿಕ್ಷಕರಿಂದಲೇ ನಡೆಯುತ್ತಿವೆ ಎಂದು ಆರೋಪಿಸಿದರು.
ಇಲ್ಲಿಗೆ ಸೇವೆ ಸಲ್ಲಿಸಿ ವರ್ಗಾವಣೆಯಾದ ಶಿಕ್ಷಕಿ ಸರೋಜಾ ಅವರನ್ನು ಇನ್ನೂ ಬಿಡುಗಡೆ ಮಾಡದೇ, ಶಾಲೆಯ ಬಿಸಿಯೂಟ ಯೋಜನೆಯ ಅಡುಗೆದಾರರ ಪತಿಯೊಬ್ಬರು ಹಣಕ್ಕಾಗಿ ತಡೆಹಿಡಿದಿದ್ದಾರೆ ಎಂದು ದೂರಿದರು.
ಶಾಲಾ ದೃಢೀಕರಣ ಪ್ರಮಾಣಪತ್ರ ಸೇರಿದಂತೆ ಇತರೆ ಶಾಲಾ ದಾಖಲಾತಿಗಳನ್ನು ಪಡೆಯಲು ಗ್ರಾಮಸ್ಥರು ಬೇರೆ ಊರಿಗೆ ಹೋಗಬೇಕಾದ ದುಸ್ಥಿತಿ ಉಂಟಾಗಿದೆ. ಇಲ್ಲಿಗೆ ನಿಯೋಜನೆಗೊಂಡ ಶಿಕ್ಷಕರಿಗೆ ಮುಖ್ಯಶಿಕ್ಷಕ ಹುದ್ದೆಯ ಚಾರ್ಜ್ ನೀಡಬಾರದು ಹಾಗೂ ಶಿಕ್ಷಕಿ ಸರೋಜಾ ಅವರನ್ನು ಬಿಡುಗಡೆ ಮಾಡಬಾರದು ಎಂದು ಗ್ರಾಮದ ಹನುಮೇಶ ಎಂಬವರು ತಾಕೀತು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇತ್ತೀಚೆಗೆ ಹುಲಿಹೈದರ ಶಾಲೆಯ ಶಿಕ್ಷಕ ಶಾಮಮೂರ್ತಿ ಅವರು ವರ್ನಖೇಡ ಶಾಲೆಗೆ ನಿಯೋಜನೆಗೊಂಡು ಚಾರ್ಜ್ ಸ್ವೀಕರಿಸಲು ಬಂದ ಸಂದರ್ಭದಲ್ಲಿ, ಹನುಮೇಶ ಅವರು ಕ್ರಿಮಿಕೀಟ ನಾಶಕ ಔಷಧಿಯ ಖಾಲಿ ಬಾಟಲಿಯಲ್ಲಿ ನೀರು ತುಂಬಿಕೊಂಡು ವಿಷಸೇವನೆ ಮಾಡಿರುವಂತೆ ನಾಟಕವಾಡಿದ್ದಾರೆ. ಈ ವಿಷಯವನ್ನು ನೆಪ ಮಾಡಿಕೊಂಡು ಹನುಮೇಶನ ಪತ್ನಿ ಹಾಗೂ ಬಿಸಿಯೂಟ ಅಡುಗೆದಾರರಾದ ಶ್ರೀದೇವಿ ಅವರು ಶಾಲಾ ದಾಖಲಾತಿಗಳನ್ನು ಎತ್ತಿಕೊಂಡು ಸುಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಗ್ರಾಮಸ್ಥರು ವಿವರಿಸಿದರು.
ನನ್ನ ಪತಿ ಸತ್ತರೆ ಅದಕ್ಕೆ ಅಧಿಕಾರಿಗಳು ಮತ್ತು ಗ್ರಾಮಸ್ಥರೇ ಕಾರಣ ಎಂದು ಬೆದರಿಕೆ ಹಾಕಿರುವ ವಿಡಿಯೋ ಕೂಡ ಇದೆ. ಜೊತೆಗೆ ಗ್ರಾಮಸ್ಥರ ವಿರುದ್ಧ ದೂರು ನೀಡಿ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದರು.
ಇಡೀ ಗ್ರಾಮ ಶಾಲೆಯ ಪರವಾಗಿದ್ದರೂ, ಅಡುಗೆದಾರ ಹಾಗೂ ಅವರ ಪತಿ ಶಿಕ್ಷಣ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಮತ್ತು ಶಿಕ್ಷಕರ ಮೇಲೆ ದೌರ್ಜನ್ಯ ಎಸಗಿಸುತ್ತಿದ್ದಾರೆ. ಆದ್ದರಿಂದ ಶ್ರೀದೇವಿ ಅವರನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಶಾಲೆಗೆ ಕಾಯಂ ಶಿಕ್ಷಕರನ್ನು ನೇಮಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸಿದರೆ ಮಾತ್ರ ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇವೆ ಎಂದು ಮನವಿಯಲ್ಲಿ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಯಮನೂರಪ್ಪ, ಉಪಾಧ್ಯಕ್ಷ ಲಕ್ಷ್ಮಣ, ಗ್ರಾಮ ಪಂಚಾಯಿತಿ ಸದಸ್ಯ ಕನಕಪ್ಪ, ಮಾಜಿ ಉಪಾಧ್ಯಕ್ಷ ಹನುಮೇಶ ದೇವೇಂದ್ರಪ್ಪ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಮಾರುತಿ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಶಿವಕುಮಾರ ಈಚನಾಳ, ಗ್ರಾಮದ ಪ್ರಮುಖರಾದ ನಾಗರಾಜ, ಪರಪ್ಪ, ಶರಣಪ್ಪ, ವಿರುಪಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ತಹಶೀಲ್ದಾರ್ ವಿಶ್ವನಾಥ ಮುರುಡಿ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.







