ಕನಕಗಿರಿ | ಯುವತಿ ಆತ್ಮಹತ್ಯೆ : ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ಕನಕಗಿರಿ: ಸಮೀಪದ ಅರಳಹಳ್ಳಿ ಗ್ರಾಮದಲ್ಲಿ ಯುವತಿಯೊಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ.
ಮೃತರನ್ನು ಕುಕನೂರು ತಾಲ್ಲೂಕಿನ ಕುದ್ರಿಮೋತಿ ಗ್ರಾಮದ ನಿವಾಸಿ ಕೆ.ಎಂ. ಅನ್ನಪೂರ್ಣ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಅನ್ನಪೂರ್ಣ ಅವರನ್ನು ಅರಳಹಳ್ಳಿ ಗ್ರಾಮದ ರೇವಣಸಿದ್ದಯ್ಯ ಅವರ ಪುತ್ರ ಶರಣಬಸವಸ್ವಾಮಿ ಎಂಬುವರಿಗೆ ಮದುವೆ ಮಾಡಿಕೊಡಲಾಗಿತ್ತು. ಬಿ.ಎಸ್ಸಿ, ಬಿ.ಇಡಿ ಪದವೀಧರಳಾಗಿದ್ದ ಅನ್ನಪೂರ್ಣ ಇತ್ತೀಚೆಗೆ ನಡೆದ ಶಿಕ್ಷಕ ಅರ್ಹತಾ ಪರೀಕ್ಷೆ (ಟಿಇಟಿ)ಯಲ್ಲಿ ಉತ್ತೀರ್ಣರಾಗಿದ್ದರು ಎಂಬುದು ತಿಳಿದುಬಂದಿದೆ.
ಕಾಂತಯ್ಯಸ್ವಾಮಿ ಎಂಬುವರು ಅನ್ನಪೂರ್ಣಳ ಯೋಗಕ್ಷೇಮ ವಿಚಾರಿಸಲು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ ಆಕೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಬಳಿಕ ಅವರ ಅತ್ತೆಯೂ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗಲಿಲ್ಲ. ಸ್ವಲ್ಪ ಸಮಯದ ನಂತರ ಅನ್ನಪೂರ್ಣಳ ಅತ್ತೆ ಕಾಂತಯ್ಯಸ್ವಾಮಿ ಅವರಿಗೆ ಸಂಜೆ ಕರೆ ಮಾಡಿ, ಅನ್ನಪೂರ್ಣಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ. ಈ ವಿಷಯವನ್ನು ಕಾಂತಯ್ಯಸ್ವಾಮಿ ನನ್ನ ಗಮನಕ್ಕೆ ತಂದಿದ್ದು, ಅವರು ಹೇಳಿದ ವಿಷಯದಲ್ಲಿ ಸಂಶಯವಿರುವುದರಿಂದ ಸಾವಿನ ಹಿಂದಿನ ಸತ್ಯವನ್ನು ಕೂಲಂಕಷವಾಗಿ ತನಿಖೆ ನಡೆಸಬೇಕು ಎಂದು ಮೃತಳ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.







