ರಾಜ್ಯಪಾಲರು ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಯನ್ನು ತಿರಸ್ಕರಿಸಿಲ್ಲ, ಬದಲಾಗಿ ಸ್ಪಷ್ಟನೆ ಕೇಳಿದ್ದಾರೆ : ಕೆ.ಎನ್.ರಾಜಣ್ಣ

ಕೊಪ್ಪಳ : ರಾಜ್ಯಪಾಲರು ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಯನ್ನು ತಿರಸ್ಕರಿಸಲಿಲ್ಲ, ಇದರಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚಿದೆ. ಹೀಗಿದ್ದರೆ ಸಾಲ ನೀಡಲು ಯಾರು ಮುಂದೆ ಬರುತ್ತಾರೆ, ಇದರಿಂದ ಬಡ ಜನರಿಗೆ ತೊಂದರೆ ಆಗುತ್ತದೆ ಎಂದು ಈ ಸುಗ್ರೀವಾಜ್ಞೆಯನ್ನು ಪರಿಶೀಲಿಸಿ ಸ್ಪಷ್ಟನೆ ಕೊಡಲು ಕೇಳಿದ್ದಾರೆ. ಈಗಾಗಲೇ ಸ್ಪಷ್ಟನೆಯನ್ನು ನೀಡಲಾಗಿದ್ದು ಮುಂದೆ ರಾಜ್ಯಪಾಲರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಹೇಳಿದರು.
ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ನಡೆಯಲಿರುವ ಸಹಕಾರಿ ಸಮಾವೇಶಕ್ಕೆ ತೆರಳುವ ಮುನ್ನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಹಕಾರಿ ಸಮಾವೇಶ ಪಕ್ಷಾತೀತ, ಜಾತ್ಯಾತೀತ ಕಾರ್ಯಕ್ರಮ, ಸಹಕಾರಿ ಆಂದೋಲನ, ಜನರ ಆಂದೋಲನ ಆಗಬೇಕು. ಕಟ್ಟಕಡೆಯ ವ್ಯಕ್ತಿಯು ಸಹಕಾರಿ ಆಗಬೇಕು ಎಂಬ ಉದ್ದೇಶಕ್ಕೆ ಜನರಲ್ಲಿ ಜಾಗೃತಿ ಮೂಡಿಸಲು ಸಮಾವೇಶ ಆಯೋಜಿಸಲಾಗಿದೆ ಎಂದರು.
ಡಿಸಿಸಿ ಬ್ಯಾಂಕುಗಳು ನಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕಗಳಿಂದ ಸಾಲ ಪಡೆದು ಸಾಲ ನೀಡುತ್ತವೆ. ಇದಕ್ಕೆ ಸರಕಾರದ ಅನುದಾನ ಇರುವುದಿಲ್ಲ. ಸಾಲದ ಮೊತ್ತವನ್ನು ಠೇವಣಿ ಹಣದಿಂದ ಕೊಡಲಾಗುತ್ತಿದ್ದು, ಹಣಕಾಸಿನ ಲಭ್ಯತೆಯಿಂದಾಗಿ ಸಾಲ ನೀಡುವುದರಲ್ಲಿ ಸಮಸ್ಯೆ ಆಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ್, ಸಂಸದ ರಾಜಶೇಖರ ಹಿಟ್ನಾಳ್, ಮಾಜಿ ಸಂಸದ ಸಂಗಣ್ಣ ಕರಡಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಷ, ನಗರಸಭೆ ಸ್ಥಾಯಿ ಸಮಿತಿ ಸದ್ಯಸ್ಯ ಅಕ್ಬರ್ ಪಲ್ಟನ್, ಕೃಷ್ಣ ಇಟ್ಟಂಗಿ, ಸಲೀಮ್ ಅಳವಂಡಿ ಸೇರಿದಂತೆ ಮುಂತಾದ ಮುಖಂಡರು ಉಪಸ್ಥಿತರಿದ್ದರು.







