Koppal | ಗುರುಪೂರ್ಣಿಮೆ ಅಂಗವಾಗಿ ಹೊಸಲಿಂಗಾಪುರದಲ್ಲಿ ಶಿರಡಿ ಸಾಯಿಬಾಬಾ ಜಾತ್ರಾ ಮಹೋತ್ಸವ ಸಂಭ್ರಮ

ಕೊಪ್ಪಳ: ತಾಲೂಕಿನ ಹೊಸಲಿಂಗಾಪುರ ಗ್ರಾಮದಲ್ಲಿ ಗುರುಪೂರ್ಣಿಮೆ ಅಂಗವಾಗಿ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದ ವತಿಯಿಂದ ಶ್ರೀ ಶಿರಡಿ ಸಾಯಿಬಾಬಾ ಜಾತ್ರಾ ಮಹೋತ್ಸವವನ್ನು ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಬೆಳಗ್ಗಿನಿಂದಲೇ ವಿಶೇಷ ಪೂಜೆ, ಅಭಿಷೇಕ, ಕುಂಭಮೇಳ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ದೇವಸ್ಥಾನದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿ ಸಾಯಿಬಾಬಾ ಅವರ ದರ್ಶನ ಪಡೆದು ಆಶೀರ್ವಾದ ಪಡೆದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದ ರಥೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡು ಜಯಘೋಷ ಮೊಳಗಿಸಿದರು. ರಥದ ಮೇಲೆ ಪುಷ್ಪಾರ್ಚನೆ ಸಲ್ಲಿಸಿ ಭಕ್ತಿಭಾವದಿಂದ ಸಾಯಿಬಾಬಾ ಅವರನ್ನು ಆರಾಧಿಸಿದರು. ಡೊಳ್ಳು ಕುಣಿತ ಸೇರಿದಂತೆ ಸಾಂಪ್ರದಾಯಿಕ ಕಲಾ ಪ್ರದರ್ಶನಗಳು ಜಾತ್ರೆಯ ಮೆರುಗನ್ನು ಹೆಚ್ಚಿಸಿವೆ.
ಜಾತ್ರಾ ಮಹೋತ್ಸವವು ಗ್ರಾಮದಲ್ಲಿ ಧಾರ್ಮಿಕ ವಾತಾವರಣ ಮೂಡಿಸುವುದರ ಜೊತೆಗೆ ಗ್ರಾಮಸ್ಥರ ಒಗ್ಗಟ್ಟು, ಸಹೋದರತೆ ಹಾಗೂ ಭಾವೈಕ್ಯತೆಯ ಸಂಕೇತವಾಗಿ ಗಮನ ಸೆಳೆಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಶೆಟ್ಟಿ, ಉಪಾಧ್ಯಕ್ಷ ನವಾಬ್ ಸಾಬ್ ಕುಕನೂರು ಸೇರಿದಂತೆ ಪ್ರಮುಖರಾದ ವಸಂತ್, ನಾಗರಾಜ್, ಉಮೇಶ್ ಗುಪ್ತ, ಶರಣಪ್ಪ ದಾಸರ್, ಹುಲುಗಪ್ಪ, ಕೃಷ್ಣಕುಮಾರ್, ಮಹೇಶ್, ಚಾಂದ್ ಬಾಷಾ, ಕೃಷ್ಣಾರೆಡ್ಡಿ, ವೆಂಕಟೇಶ ಅಗಸಿ, ಲೋಕೇಶ್ ಹೊಸಳ್ಳಿ, ಹುಲುಗಪ್ಪ ಹ್ಯಾಟಿ, ಅನ್ಸಾರ್ ಬಾಬು, ಅನಿಲ್ ಕುಮಾರ್ ಶೆಟ್ಟಿ ಹಾಗೂ ದೇವಸ್ಥಾನ ಸಮಿತಿ ಸದಸ್ಯರು, ಧರ್ಮಸ್ಥಳ ಕ್ಷೇತ್ರ ಗ್ರಾಮೀಣಾಭಿವೃದ್ಧಿ ಸಂಘದ (ಎಸ್.ಪಿ)ಭಾಗ್ಯಲಕ್ಷ್ಮಿ, ಸಮೀರ್ , ಗ್ರಾಮಸ್ಥರು ಮತ್ತು ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.






