Koppal | 11-ಎ ಉಪಕಾಲುವೆಗೆ ನೀರು ಹರಿಸಲು ಜು.31ರಂದು ಅಂಜನಾದ್ರಿಯಿಂದ ಮುನಿರಾಬಾದ್‌ವರೆಗೆ ರೈತರ ಪಾದಯಾತ್ರೆ

ಕೊಪ್ಪಳ: ತುಂಗಭದ್ರಾ ಎಡದಂಡೆ 11-ಎ ಉಪಕಾಲುವೆವರೆಗೆ ನೀರು ಹರಿಸುವಂತೆ ಆಗ್ರಹಿಸಿ ಜುಲೈ 31ರಂದು ಅಂಜನಾದ್ರಿ ಬೆಟ್ಟದಿಂದ ಮುನಿರಾಬಾದ್ ತುಂಗಭದ್ರಾ ಡ್ಯಾಂ ಮುಖ್ಯ ಕಚೇರಿವರೆಗೆ ಬೃಹತ್ ರ‍್ಯಾಲಿ ಹಾಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡ ಬಸವರಾಜ ಕ್ಯಾವಟರ್ ತಿಳಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಜನಾದ್ರಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿದ ಬಳಿಕ ಬೈಕ್ ಹಾಗೂ ಟ್ರ್ಯಾಕ್ಟರ್ ರ‍್ಯಾಲಿ ಮೂಲಕ ಹಿಟ್ನಾಳ್ ಕ್ರಾಸ್‌ವರೆಗೆ ತೆರಳಿ, ಅಲ್ಲಿಂದ ಮುನಿರಾಬಾದ್ ಕಾಡಾ ಕಚೇರಿವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಹೇಳಿದರು.
ತುಂಗಭದ್ರಾ ಆಡಳಿತ ಮಂಡಳಿ ರೈತರ ಬೇಡಿಕೆಯಂತೆ ನೀರು ಬಿಡುಗಡೆ ಮಾಡದಿದ್ದರೆ, ಅಂದಿನಿಂದಲೇ ಕಾಡಾ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಹಿಂದೆ ಜುಲೈ 20ರಂದು ಮುನಿರಾಬಾದ್‌ನಲ್ಲಿ ಪ್ರತಿಭಟನೆ ನಡೆಸಿ, 11-ಎ ಉಪಕಾಲುವೆಗೆ ಒಂದು ಬೆಳೆಗೆ ಅಗತ್ಯವಿರುವ 1.5 ಟಿಎಂಸಿ ನೀರು ಹರಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಜುಲೈ 21ರಂದು ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿದರೂ ಸರ್ಕಾರದಿಂದ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಆರೋಪಿಸಿದರು.
ಕೃಷ್ಣ ನ್ಯಾಯಮಂಡಳಿ ತೀರ್ಪು ಹಾಗೂ ಕೊರಗಲ್ ಅಣೆಕಟ್ಟಿನ ಕಾಲುವೆಗಳ ಹಕ್ಕಿನ ಪ್ರಕಾರ ಈ ಭಾಗದ ರೈತರಿಗೆ ನೀರಿನ ಮೇಲೆ ಮೊದಲ ಹಕ್ಕು ಇದೆ. ಆದರೂ ಸರ್ಕಾರ ನೀರು ಹರಿಸಲು ನಿರಾಕರಿಸುತ್ತಿದ್ದು, ರೈತರ ಹಕ್ಕನ್ನು ಕಸಿಯಲು ಅವಕಾಶ ನೀಡುವುದಿಲ್ಲ. ಇದೇ ಕಾರಣಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ತುಂಗಭದ್ರಾ ಎಡದಂಡೆ ವ್ಯಾಪ್ತಿಯ ರೈತರು, ಯುವಕರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡುಗಡೆ ಮಾಡುವಂತೆ ರೈತರು ಮಾಡಿರುವ ಬೇಡಿಕೆ ನ್ಯಾಯಸಮ್ಮತವಾಗಿದೆ. ಪಂಪಾ ಸರೋವರದಲ್ಲಿ ಪೂರ್ವಭಾವಿ ಸಭೆ ನಡೆಸಿ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ. ಶಾಸಕ ಜನಾರ್ದನ ರೆಡ್ಡಿ ಅವರ ನೇತೃತ್ವದಲ್ಲೂ ಅಪಾರ ಸಂಖ್ಯೆಯಲ್ಲಿ ರೈತರು ಹಾಗೂ ಸಾರ್ವಜನಿಕರು ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ನಿಗದಿಯಂತೆ ನೀರು ಬಿಡುಗಡೆ ಮಾಡದಿದ್ದರೆ ಅದರ ಪರಿಣಾಮಗಳಿಗೆ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಪರಣ್ಣ ಮುನವಳ್ಳಿ ಎಚ್ಚರಿಕೆ ನೀಡಿದರು.
ಈ ಪತ್ರಿಕಾ ಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ್, ಖಾಜಾ ಹುಸ್ಸೇನ್ ಹೊಸಳ್ಳಿ , ಸೇರಿ ಇತರರು ಪಾಲ್ಗೊಂಡಿದ್ದರು.






