Koppal | ವಿಶೇಷ ಚೇತನರಿಗಾಗಿ 3 ದಿನಗಳ ಕ್ರೀಡಾ ತರಬೇತಿ ಕಾರ್ಯಾಗಾರ : ಧರಣಿ ಬಿ.

ಕೊಪ್ಪಳ: ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ವಿಶೇಷ ಚೇತನರಿಗಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆ.27ರಿಂದ 29ರವರೆಗೆ ಮೂರು ದಿನಗಳ ಕ್ರೀಡಾ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಎಎನ್‌ಎ (ಆಗು ನೀ ಅನಿಕೇತನ) ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಧರಣಿ ಬಿ. ಸಸಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾರ್ಯಾಗಾರ ನಡೆಯಲಿದೆ. ಜಿಲ್ಲೆಯ ವಿಶೇಷ ಚೇತನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಾಗಾರದಲ್ಲಿ ಸುಮಾರು 150 ವಿಶೇಷ ಚೇತನರು ಭಾಗವಹಿಸುವ ನಿರೀಕ್ಷೆಯಿದ್ದು, ಅವರಲ್ಲಿ 30 ಮಂದಿಯನ್ನು ಆಯ್ಕೆ ಮಾಡಿ ಮುಂದಿನ ದಿನಗಳಲ್ಲಿ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಅಗತ್ಯ ತರಬೇತಿ ನೀಡಲಾಗುವುದು ಎಂದು ಹೇಳಿದರು.
ಅಂತಾರಾಷ್ಟ್ರೀಯ ಮಟ್ಟದ ಈಜು ಕ್ರೀಡಾಪಟುಗಳಾದ ರಾಘವೇಂದ್ರ ಆರ್. ಅನ್ವೇಕರ್, ಶ್ರೀಧರ ನಾಗಪ್ಪ, ಕಾಮನ್‌ವೆಲ್ತ್ ಕ್ರೀಡಾಕೂಟದ ಫೆನ್ಸಿಂಗ್‌ನಲ್ಲಿ ಚಿನ್ನದ ಪದಕ ವಿಜೇತ ರಾಘವೇಂದ್ರ ಪಿ., ಬಿ. ಆನಂದಕುಮಾರ್, ಆರ್. ರಾಮಚಂದ್ರ ಹಾಗೂ ಎಸ್.ಆರ್. ಶಿಂಧೆ ಸೇರಿದಂತೆ ಹಲವು ಕ್ರೀಡಾಪಟುಗಳು ಮತ್ತು ತರಬೇತುದಾರರು ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲ ವಿಶೇಷ ಚೇತನರು ಕಾರ್ಯಾಗಾರದಲ್ಲಿ ಭಾಗವಹಿಸಲು  ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಧರಣಿ ಬಿ. ಸಸಿ ಮನವಿ ಮಾಡಿದರು.






