ಕೊಪ್ಪಳ: 5 ಕಿ.ಮೀ ಮ್ಯಾರಥಾನ್ ಓಟ: ಸರಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರ ಸಾಧನೆ

ಕೊಪ್ಪಳ, ಸೆ. 20: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಬೆಳಿಗ್ಗೆ 7.30 ಕ್ಕೆ ಜಿಲ್ಲಾಡಳಿತ ಭವನದಿಂದ ಜಿಲ್ಲಾ ಕ್ರೀಡಾಂಗಣದವರೆಗೆ 5 ಕಿ.ಮೀ ಮ್ಯಾರಥಾನ್ ಸ್ಪರ್ಧೆ ನಡೆಯಿತು.
ಈ ಸ್ಪರ್ಧೆಯಲ್ಲಿ ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಪಾರ್ವತಿ ಅವರು ದ್ವಿತೀಯ ಸ್ಥಾನ ಪಡೆದು ಪ್ರಮಾಣ ಪತ್ರ ಹಾಗೂ ₹3,500/- ನಗದು ಬಹುಮಾನವನ್ನು ಪಡೆದರು. ಹಾಗೆಯೇ, ವಿದ್ಯಾರ್ಥಿನಿ ಸರಿತಾ ಚೌಹಾನ್ ಅವರು ತೃತೀಯ ಸ್ಥಾನ ಪಡೆದು ಪ್ರಮಾಣ ಪತ್ರದೊಂದಿಗೆ ₹2,500/- ನಗದು ಬಹುಮಾನವನ್ನು ಗಳಿಸಿದರು. 4ನೇ ಸ್ಥಾನ ಭೂಮಿಕಾ, 5ನೇ ಸ್ಥಾನ ಯಶೋಧ ಇವರು ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿನಿಯರ ಸಾಧನೆಯನ್ನು ಶ್ಲಾಘಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಗಣಪತಿ ಕೆ. ಲಮಾಣಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರದೀಪ್ ಕುಮಾರ ಯು. ಹಾಗೂ ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.





