Koppal | ಭೋವಿ ಸಮುದಾಯದ ಅಭಿವೃದ್ಧಿಗೆ 75.60 ಕೋಟಿ ರೂ. ಅನುದಾನ : ರಾಮಪ್ಪ ಎಂ.

ಕೊಪ್ಪಳ: ಭೋವಿ ಜನಾಂಗದ ಸರ್ವಾಂಗೀಣ ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವಿವಿಧ ಕಲ್ಯಾಣ ಯೋಜನೆಗಳನ್ನು ಸಮುದಾಯದ ಅರ್ಹ ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ತಲುಪಿಸಲಾಗುತ್ತಿದೆ ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ ಎಂ. ಹೇಳಿದರು.
ಜಿಲ್ಲಾ ಪಂಚಾಯತ್‌ನ ಜೆ.ಎಚ್. ಪಾಟೇಲ್ ಸಭಾಂಗಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2026-27ನೇ ಸಾಲಿಗೆ ನಿಗಮದ ವಿವಿಧ ಯೋಜನೆಗಳಿಗಾಗಿ ರಾಜ್ಯ ಸರ್ಕಾರ ಒಟ್ಟು 75.60 ಕೋಟಿ ರೂ. ಅನುದಾನ ನಿಗದಿಪಡಿಸಿದ್ದು, ಈ ಪೈಕಿ ಈಗಾಗಲೇ 18.90 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಭೋವಿ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಪರಿಶಿಷ್ಟ ಜಾತಿ ವ್ಯಾಪ್ತಿಗೆ ಬರುವ ಭೋವಿ, ಒಡ್, ಒಡ್ಡೆ, ಒಡ್ಡರ್, ವಡ್ಕರ್, ವಡ್ಡರ, ಕಲ್ಲು ಒಡ್ಡರ, ಭೋವಿ (ನಾನ್ ಬೆಸ್ತ) ಹಾಗೂ ಮಣ್ಣುವಡ್ಡರ ಸೇರಿದಂತೆ ಒಟ್ಟು ಒಂಬತ್ತು ಉಪಜಾತಿಗಳನ್ನು ವಿವಿಧ ಯೋಜನೆಗಳ ಫಲಾನುಭವಿಗಳಾಗಿ ಗುರುತಿಸಲಾಗಿದೆ ಎಂದು ಹೇಳಿದರು.
ಕೊಪ್ಪಳ ಜಿಲ್ಲೆಯಲ್ಲಿ 2022-23ರಿಂದ 2025-26ನೇ ಸಾಲಿನವರೆಗೆ ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ 124 ಫಲಾನುಭವಿಗಳಿಗೆ 124 ಲಕ್ಷ ರೂ. ವಿತರಿಸಲಾಗಿದೆ. ಉದ್ಯಮಶೀಲತಾ ಯೋಜನೆಯಡಿ ಬ್ಯಾಂಕ್ ಸಹಯೋಗದೊಂದಿಗೆ 1 ಲಕ್ಷ ರೂ. ಸಹಾಯಧನದಡಿ 36 ಫಲಾನುಭವಿಗಳಿಗೆ 36 ಲಕ್ಷ ರೂ., 2 ಲಕ್ಷ ರೂ. ಸಹಾಯಧನದಡಿ 31 ಫಲಾನುಭವಿಗಳಿಗೆ 62 ಲಕ್ಷ ರೂ. ಹಾಗೂ 3.50 ಲಕ್ಷ ರೂ. ಸಹಾಯಧನದಡಿ 9 ಫಲಾನುಭವಿಗಳಿಗೆ 31.50 ಲಕ್ಷ ರೂ. ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸ್ವಾವಲಂಬಿ ಸಾರಥಿ ಯೋಜನೆಯಡಿ ವಾಹನ ಖರೀದಿಗೆ ತಲಾ 4 ಲಕ್ಷ ರೂ. ಸಹಾಯಧನದಂತೆ 35 ಫಲಾನುಭವಿಗಳಿಗೆ ಒಟ್ಟು 140 ಲಕ್ಷ ರೂ. ನೀಡಲಾಗಿದೆ. ಮೈಕ್ರೋಕ್ರೆಡಿಟ್ ಕಿರುಸಾಲ ಯೋಜನೆಯಡಿ 18 ಸಂಘಗಳ 180 ಫಲಾನುಭವಿಗಳಿಗೆ 60 ಲಕ್ಷ ರೂ. ಸಾಲ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಗಂಗಾ ಕಲ್ಯಾಣ ಯೋಜನೆಯಡಿ ಜಿಲ್ಲೆಯಲ್ಲಿ 59 ಕೊಳವೆಬಾವಿಗಳನ್ನು ಕೊರೆಸಲಾಗಿದ್ದು, ಗುತ್ತಿಗೆದಾರ ಕಂಪನಿಗೆ 20.65 ಲಕ್ಷ ರೂ. ಪಾವತಿಸಲಾಗಿದೆ. ಭೂ ಒಡೆತನ ಯೋಜನೆಯಡಿ 34 ಫಲಾನುಭವಿಗಳಿಗೆ ಸುಮಾರು 4.80 ಕೋಟಿ ರೂ. ವೆಚ್ಚದಲ್ಲಿ 38.25 ಎಕರೆ ಖುಷ್ಕಿ ಹಾಗೂ 9 ಎಕರೆ ತರಿ ಭೂಮಿಯನ್ನು ಹಂಚಿಕೆ ಮಾಡಲಾಗಿದೆ. 2023-24ನೇ ಸಾಲಿನಿಂದ ಈ ಯೋಜನೆಯ ಘಟಕ ವೆಚ್ಚವನ್ನು 20 ಲಕ್ಷ ರೂ. ಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಶಿವಸ್ವಾಮಿ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಎನ್. ಪುಷ್ಪಲತಾ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.






