Koppal | ಕುಕನೂರಿನ ದ್ಯಾಂಪುರ ಗ್ರಾಮದ ಸರಕಾರಿ ಶಾಲೆ ಸಮೀಪ ನವಜಾತ ಶಿಶು ಪತ್ತೆ

ಕುಕನೂರು: ತಾಲೂಕಿನ ದ್ಯಾಂಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಸಮೀಪ ಭಾನುವಾರ ಬೆಳಿಗ್ಗೆ ನವಜಾತ ಗಂಡು ಶಿಶುವೊಂದು ಪತ್ತೆಯಾದ ಘಟನೆ ನಡೆದಿದೆ.
ಹುಟ್ಟಿದ ಕೆಲವೇ ಗಂಟೆಗಳಾಗಿದ್ದ ಶಿಶುವನ್ನು ಅಪರಿಚಿತರು ಶಾಲೆಯ ಸಮೀಪ ಬಿಟ್ಟು ಹೋಗಿರುವುದು ತಿಳಿದು ಬಂದಿದೆ. ಸ್ಥಳೀಯರು ಶಿಶುವನ್ನು ಗಮನಿಸಿ ತಕ್ಷಣ ಅಂಗನವಾಡಿ ಕಾರ್ಯಕರ್ತೆಗೆ ಮಾಹಿತಿ ನೀಡಿದ್ದಾರೆ.
ಬಳಿಕ ಅಂಗನವಾಡಿ ಕಾರ್ಯಕರ್ತೆ ಸ್ಥಳಕ್ಕೆ ಭೇಟಿ ನೀಡಿ ಶಿಶುವಿನ ಸ್ಥಿತಿ ಪರಿಶೀಲಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶಿಶುವನ್ನು ತಮ್ಮ ವಶಕ್ಕೆ ಪಡೆದುಕೊಂಡು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ನಂತರ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ.
ವೈದ್ಯರ ಪ್ರಕಾರ, ಶಿಶು ಜನಿಸಿ ಸುಮಾರು ನಾಲ್ಕರಿಂದ ಐದು ಗಂಟೆಗಳಾಗಿರಬಹುದೆಂದು ಅಂದಾಜಿಸಲಾಗಿದೆ. ಶಿಶು ಆರೋಗ್ಯವಾಗಿರುವುದಾಗಿ ತಿಳಿದು ಬಂದಿದೆ.
ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿ ಬೆಟ್ಟದಪ್ಪ ಮಾಳೆಕೊಪ್ಪ ಮಾತನಾಡಿ, ಶಿಶುವನ್ನು ಬಿಟ್ಟು ಹೋಗಿರುವ ಸಾಧ್ಯತೆ ಇದ್ದು, ಅಗತ್ಯ ಚಿಕಿತ್ಸೆ ನೀಡಲಾಗಿದೆ. ಮುಂದಿನ ಕ್ರಮವನ್ನು ಮಕ್ಕಳ ಕಲ್ಯಾಣ ಸಮಿತಿ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.




