Koppal | ಲಾರಿ ಮಾಲಕನ ಮೇಲೆ ಹಲ್ಲೆ ಆರೋಪ: 11 ಜನರ ವಿರುದ್ಧ ಪ್ರಕರಣ ದಾಖಲು

ಕೊಪ್ಪಳ: ಲಾರಿ ಬಾಡಿಗೆ ಹಾಗೂ ಲಾರಿ ಮಾಲಕರ ಸಂಘದ ವಿಚಾರವಾಗಿ ಉಂಟಾದ ವಿವಾದದ ಹಿನ್ನೆಲೆಯಲ್ಲಿ ಲಾರಿ ಮಾಲಕರೊಬ್ಬರ ಮೇಲೆ 11 ಮಂದಿ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ನಗರದ 10ನೇ ವಾರ್ಡ್ನ ಕನಕಗಿರಿ ಓಣಿಯ ನಿವಾಸಿ ಮಹಮ್ಮದ್ ಗೌಸ್ ಹಲ್ಲೆಗೊಳಗಾದ ಲಾರಿ ಮಾಲಕ. ಅಕ್ಟೋಬರ್ 30ರಂದು ಸಂಜೆ 6.20ರ ಸುಮಾರಿಗೆ ನಗರದ ಬಸವೇಶ್ವರ ವೃತ್ತದ ಸಮೀಪದ ಎಪಿಎಂಸಿ ಆವರಣದಲ್ಲಿರುವ ಅತ್ತರ್ ಟ್ರೇಡಿಂಗ್ ಕಂಪನಿ ಬಳಿ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರ ನಡುವೆ ಲಾರಿ ಬಾಡಿಗೆ ಮತ್ತು ಸಂಘದ ವಿಚಾರವಾಗಿ ವಿವಾದ ಉಂಟಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಯ್ಯದ್ ಮಹಮೂದ್ ಹುಸೇನಿ, ಸಯ್ಯದ್ ಸಾದಿಕ್ ಅಲಿ, ಹೈದರ್ ಅಲಿ ಗಂಗಾವತಿ ಸೇರಿದಂತೆ 11 ಮಂದಿ ತಮ್ಮ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಹಮ್ಮದ್ ಗೌಸ್ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಕುರಿತು ಕೊಪ್ಪಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.




