Koppal | ನಿಯಮ ಉಲ್ಲಂಘನೆ ಆರೋಪ : ಕಲ್ಯಾಣಿ ಸ್ಟೀಲ್ಸ್‌ಗೆ ನೋಟಿಸ್, ವಿದ್ಯುತ್ ಕಡಿತ

ಕೊಪ್ಪಳ : ಜಲಮಾಲಿನ್ಯ ಹಾಗೂ ಪರಿಸರ ಸಂರಕ್ಷಣಾ ನಿಯಮ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಗಿಣಿಗೇರಾ ಸಮೀಪದ ಕಲ್ಯಾಣಿ ಸ್ಟೀಲ್ಸ್ (ಹೊಸಪೇಟೆ ಸ್ಟೀಲ್ ಲಿಮಿಟೆಡ್) ಕಾರ್ಖಾನೆಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದ್ದು, ಅದರಂತೆ ಜಿಲ್ಲಾಡಳಿತ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ.
ಇದರಿಂದ ಮಂಗಳವಾರ ಬೆಳಗ್ಗೆಯಿಂದಲೇ ಕಾರ್ಖಾನೆಯ ಉತ್ಪಾದನಾ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದೆ. 1998ರಲ್ಲಿ ಆರಂಭಗೊಂಡಿದ್ದ ಈ ಕಾರ್ಖಾನೆ 28 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಕಾರ್ಯಾಚರಣೆ ನಿಲ್ಲಿಸಿದೆ.
ಕಬ್ಬಿಣದ ಅದಿರಿನಿಂದ ಶುದ್ಧ ಕಬ್ಬಿಣ ಉತ್ಪಾದಿಸುವ ಈ ಕಾರ್ಖಾನೆ ವರ್ಷಕ್ಕೆ ಸುಮಾರು 0.6 ಮಿಲಿಯನ್ ಟನ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಆದರೆ ಪರಿಸರ ಮಾಲಿನ್ಯ ನಿಯಂತ್ರಣ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಕಠಿಣ ಕ್ರಮ ಕೈಗೊಂಡಿದೆ.
ನೋಟಿಸ್ ಹಿನ್ನೆಲೆಯಲ್ಲಿ ಕಾರ್ಖಾನೆ ಆಡಳಿತ ಮಂಡಳಿ ತುರ್ತು ಸಭೆ ನಡೆಸಿ ಮುಂದಿನ ಕ್ರಮಗಳ ಕುರಿತು ಚರ್ಚೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ಕಾರ್ಖಾನೆಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿರುವುದನ್ನು ಕೊಪ್ಪಳ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ್ ಖಚಿತಪಡಿಸಿದ್ದಾರೆ.






