Koppal | ಆರೋಗ್ಯೇತರ ಕೆಲಸ ಹಿಂಪಡೆಯಲು ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಕೊಪ್ಪಳ, ಆ.5: ಆಶಾ ಕಾರ್ಯಕರ್ತೆಯರನ್ನು ಆರೋಗ್ಯ ಇಲಾಖೆಗೆ ಸಂಬಂಧಿಸದ ಜಾತಿ ಹಾಗೂ ಆದಾಯ ಪ್ರಮಾಣ ಪತ್ರಗಳ ಮನೆಮನೆ ವಿತರಣೆ ಮತ್ತು ಆನ್‌ಲೈನ್ ಕಾರ್ಯಕ್ಕೆ ನಿಯೋಜಿಸಿರುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ಎಐಯುಟಿಯುಸಿ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಬಳಿಕ ಪ್ರತಿಭಟನಾಕಾರರು ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಶರಣು ಗಡ್ಡಿ, ಆಶಾ ಕಾರ್ಯಕರ್ತೆಯರು ಈಗಾಗಲೇ ಗರ್ಭಿಣಿಯರು, ಬಾಣಂತಿಯರು, ನವಜಾತ ಶಿಶುಗಳ ಆರೈಕೆ, ಮಕ್ಕಳ ಲಸಿಕಾ ಕಾರ್ಯಕ್ರಮ, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ಕುಟುಂಬ ಕಲ್ಯಾಣ ಸೇರಿದಂತೆ ಹಲವು ಆರೋಗ್ಯ ಸೇವೆಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಇಂತಹ ಸಂದರ್ಭದಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸದ ಜಾತಿ ಹಾಗೂ ಆದಾಯ ಪ್ರಮಾಣ ಪತ್ರಗಳ ಮನೆಮನೆ ವಿತರಣೆ ಹಾಗೂ ಆನ್‌ಲೈನ್ ಕಾರ್ಯವನ್ನು ವಹಿಸಿರುವುದು ಅವರ ಮೂಲ ಕರ್ತವ್ಯಗಳಿಗೆ ಅಡ್ಡಿಯಾಗುವುದಲ್ಲದೆ ಸಾರ್ವಜನಿಕ ಆರೋಗ್ಯ ಸೇವೆಯ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅವರು ತಿಳಿಸಿದರು.
ಈ ಹೆಚ್ಚುವರಿ ಕೆಲಸಕ್ಕೆ ಯಾವುದೇ ಸಂಭಾವನೆ, ಪ್ರಯಾಣ ಭತ್ಯೆ, ಸರ್ಕಾರಿ ಸ್ಮಾರ್ಟ್‌ಫೋನ್ ಅಥವಾ ಅಗತ್ಯ ಸೌಲಭ್ಯಗಳನ್ನು ಸರ್ಕಾರ ಒದಗಿಸಿಲ್ಲ. ಜಿಲ್ಲೆಯ ಅನೇಕ ಆಶಾ ಕಾರ್ಯಕರ್ತೆಯರ ಬಳಿ ಸ್ಮಾರ್ಟ್‌ಫೋನ್ ಇಲ್ಲದಿರುವುದರಿಂದ ಈ ಕೆಲಸ ನಿರ್ವಹಿಸುವುದು ಕಷ್ಟಕರವಾಗಿದೆ ಎಂದು ಅವರು ಹೇಳಿದರು.
ಆದ್ದರಿಂದ ಈ ಕೆಲಸವನ್ನು ತಕ್ಷಣ ಹಿಂಪಡೆಯಬೇಕು. ಒಂದು ವೇಳೆ ಇದೇ ಕಾರ್ಯವನ್ನು ಆಶಾ ಕಾರ್ಯಕರ್ತೆಯರಿಂದ ಮಾಡಿಸಬೇಕಾದರೆ ನಿಗದಿತ ಸಂಭಾವನೆ, ಪ್ರಯಾಣ ಭತ್ಯೆ, ಸರ್ಕಾರಿ ಸ್ಮಾರ್ಟ್‌ಫೋನ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಹೊರಡಿಸಿರುವ ಜ್ಞಾಪನಾ ಪತ್ರದಂತೆ ಆಶಾ ಕಾರ್ಯಕರ್ತೆಯರ ಕರ್ತವ್ಯ ವ್ಯಾಪ್ತಿಯನ್ನು ಗೌರವಿಸಿ, ಆರೋಗ್ಯ ಇಲಾಖೆಗೆ ಸಂಬಂಧಿಸದ ಹೆಚ್ಚುವರಿ ಕೆಲಸಗಳನ್ನು ವಹಿಸಬಾರದು ಎಂದು ಒತ್ತಾಯಿಸಿದರು.
ಜುಲೈ 31ರಂದು ಸಲ್ಲಿಸಿದ್ದ ಮನವಿಗೆ ಇದುವರೆಗೆ ಯಾವುದೇ ಸಕಾರಾತ್ಮಕ ಕ್ರಮ ಕೈಗೊಳ್ಳದೇ ಅಧಿಕಾರಿಗಳ ಮೂಲಕ ಈ ಕೆಲಸವನ್ನು ಕಡ್ಡಾಯವಾಗಿ ಮಾಡಿಸುವ ಒತ್ತಡ ಮುಂದುವರಿದಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ತಕ್ಷಣ ಸಮಸ್ಯೆ ಬಗೆಹರಿಸದಿದ್ದರೆ ರಾಜ್ಯ ಸಮಿತಿಯ ನಿರ್ದೇಶನದಂತೆ ರಾಜ್ಯವ್ಯಾಪಿ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಕೌಶಲ್ಯ ದೊಡ್ಡಗೌಡರ್, ಜಿಲ್ಲಾ ಮುಖಂಡರಾದ ಶಂಕ್ರಮ್ಮ ಹಳ್ಳಿಕೇರಿ, ಅನ್ನಪೂರ್ಣ, ಶಿವಮ್ಮ, ವಿಜಯಲಕ್ಷ್ಮಿ, ಜ್ಯೋತಿಲಕ್ಷ್ಮಿ, ಅಯೋಧ್ಯಾ, ಲಾಲ್ ಬಿ, ಸುಮಂಗಲ, ದೀಪ, ಶಾರದಾ, ಗೀತಾ, ಶರಣಮ್ಮ, ಮೆರೋನಿಸ್, ಮೀನಾಕ್ಷಿ, ಈರಮ್ಮ, ರಾಜೇಶ್ವರಿ, ಹುಲಿಗೆಮ್ಮ, ರಾಧಾ, ದೇವಕ್ಕ, ರೇಖಾ ಸೇರಿದಂತೆ ನೂರಾರು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.






