ಕಾರ್ಖಾನೆ ವಿರೋಧಿಸಿ ಕೊಪ್ಪಳ ಬಂದ್: ಬೃಹತ್ ಪ್ರತಿಭಟನಾ ಜಾಥಾ

ಕೊಪ್ಪಳ : ಕೊಪ್ಪಳ ನಗರದ ಜನರ ಆರೋಗ್ಯಕ್ಕೆ ಸವಾಲೊಡ್ಡುವ ವಿನಾಶಕಾರಿ ಕಾರ್ಖಾನೆಯ ವಿಸ್ತರಣೆಯನ್ನು ವಿರೋಧಿಸಿ ಜಿಲ್ಲಾ ಪರಿಸರ ಹಿತರಕ್ಷಣಾ ವೇದಿಕೆ ಸೇರಿ ವಿವಿಧ ಸಂಘಟನೆಗಳು ಕೊಪ್ಪಳ ಬಂದ್ ಗೆ ಕರೆ ನೀಡಿತ್ತು. ಈ ನಿಟ್ಟಿನಲ್ಲಿ ಸೋಮವಾರ ಬೆಳಗ್ಗಿನಿಂದಲೇ ಜನರು ಸ್ವಯಂಪ್ರೇರಿತವಾಗಿ ತಮ್ಮ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಿದರು.
ಕಾರ್ಖಾನೆ ವಿರುದ್ಧ ಹೋರಾಟಕ್ಕೆ ಪಾಕ್ಷತೀತ ಬೆಂಬಲ ವ್ಯಕ್ತವಾಗಿದ್ದು, ಮುಸ್ಲಿಮ್ ಧರ್ಮಗುರುಗಳು ಮತ್ತು ಕ್ರಿಶ್ಚಿಯನ್ ಧರ್ಮಗುರುಗಳು ಹೋರಾಟದಲ್ಲಿ ಪಾಲ್ಗೊಂಡಿದ್ದರು. ಜತೆಗೆ ಆಟೊ ಚಾಲಕರು ಸಹಿತ ವಿವಿಧ ಸಂಟನೆಗಳ ಪದಾಧಿಕಾರಿಗಳು ಸ್ವಯಂ ಪ್ರೇರಿತವಾಗಿ ಆಗಮಿಸಿ ಕೊಪ್ಪಳ ಬಂದ್‌ಗೆ ಬೆಂಬಲ ಸೂಚಿಸಿದ್ದರು.
ಪ್ರತಿಭಟನಾ ಜಾಥಾಗೂ ಮೊದಲು ಜಿಲ್ಲೆಯ ಕವಿಗಳಿಂದ ಕಾರ್ಖಾನೆ ವಿರೋಧಿಸಿ ಬೀದಿ ಕವಿ ಗೋಷ್ಠಿಯನ್ನು ನಡೆಸಲಾಯಿತು. ಕವಿಗಳು ತಮ್ಮ ತಮ್ಮ ಕವಿತೆಗಳ ಮುಖಾಂತರ ಕಾರ್ಖಾನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಂದ್ ಬೆಂಬಲಿಸಿ ನಗರದ ಗವಿಮಠ ಆವರಣದಿಂದ ಹೊರಟ ಪ್ರತಿಭಟನಾ ಜಾಥಾದಲ್ಲಿ ಸುಮಾರು 35ರಿಂದ 40 ಸಾವಿರ ಜನರು ಭಾಗಿಯಾಗಿದ್ದರು. ನಂತರ ಕಾರ್ಖಾನೆ ವಿಸ್ತರಣೆ ವಿರೋಧಿಸಿ ತಾಲೂಕು ಕ್ರಿಡಾಂಗಣದಲ್ಲಿ ಬಹಿರಂಗ ಸಭೆ ನಡೆಸಲಾಯಿತು.
ಬಹಿರಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೊಪ್ಪಳ ಗವಿಮಠದ ಶ್ರೀಗಳು, ಕಾರ್ಖಾನೆ ಬಂದರೆ ಯುವಕರಿಗೆ ಉದ್ಯೋಗ ಸಿಗಬಹುದು. ಒಂದು ದೇಶ ಪ್ರಗತಿ ಹೊಂದಲು ಕಾರ್ಖಾನೆಗಳ ಪಾತ್ರ ಪ್ರಮುಖ ಇರಬಹುದು. ಆದರೆ ಕಾರ್ಖಾನೆಗಳು ಎಷ್ಟು ಬೇಕು, ನಮ್ಮ ಕೊಪ್ಪಳ ತಾಲೂಕಿನಲ್ಲೇ ೨೦೨ ಕಾರ್ಖಾನೆಗಳು ಇವೆ. ಅದರಲ್ಲಿ 25-30 ಕಾರ್ಖಾನೆಗಳು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಕಾರ್ಖಾನೆಗಳಾಗಿವೆ ಎಂದು ಹೇಳಿದರು.
ಜಿಲ್ಲೆಯ ತುಂಬಾ ಕಾರ್ಖಾನೆಗಳು ನಿರ್ಮಾಣ ಗೊಂಡರೆ ಇಲ್ಲಿರುವ ಜನ ಏಲ್ಲಿಗೆ ಹೋಗಬೇಕು ಎಂದು ಶ್ರೀಗಳು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಶಾಸಕ ಗಾಲಿ ಜನಾರ್ಧನ ರೆಡ್ಡಿ, ಪರಿಷತ್ ಶಾಸಕಿ ಹೇಮಲತಾ ನಾಯಕ, ಪ್ರಗತಿಪರ ಚಿಂತಕ ಅಲ್ಲಮಪ್ರಭು ಬೆಟದೂರು, ಮಾಜಿ ಸಂಸದ ಕರಡಿ ಸಂಗಣ್ಣ, ಸಿ.ವಿ ಚಂದ್ರಶೇಖರ್, ಮಾನ್ವಿ ಪಾಷಾ ಮತ್ತಿತರರು ಉಪಸ್ಥಿತರಿದ್ದರು.
ಬಿಎಸ್‌ಪಿಎಲ್ ಕಾರ್ಖಾನೆ ಮುಚ್ಚಿಸಲು ದೊಡ್ಡ ಮಟ್ಟದ ಹೊರಟಮಾಡಲಾಗುತ್ತಿದೆ, ಜಿಲ್ಲೆಯ ಎಲ್ಲಾ ಜನಪತ್ರಿನಿಧಿಗಳು ಸೇರಿ ಈ ಕಾರ್ಖಾನೆಯನ್ನು ಮುಚ್ಚಿಸಬೇಕು ಇಲ್ಲದಿದ್ದರೆ ಅವರಿಗೆ ಗೌರವ ಇರುವುದಿಲ್ಲ, ಒಂದು ವೇಳೆ ಕಾರ್ಖಾನೆ ಸ್ಥಾಪನೆಯಾದರೆ ಹೋರಾಟ ಮಾಡಲಾಗುವುದು.
- ಮಾನ್ವಿ ಪಾಷ, ಸಮಾಜ ಸೇವಕರು
ಕೊಪ್ಪಳದ ಇತಿಹಾಸದಲ್ಲೇ ಇದೊಂದು ಐತಿಹಾಸಿಕ ಹೋರಾಟ, ನಗರದಲ್ಲಿ ನಾವು ಬದುಕಬೇಕು ಮತ್ತು ಆರೋಗ್ಯವಾಗಿ ಇರಬೇಕು ಎಂದರೆ, ಇಂತಹ ಹೋರಾಟದ ಅವಶ್ಯಕತೆ ಇದೆ, ಈ ಹೊರಾಟ ಜ್ಯಾತ್ಯಾತಿತ, ಪಕ್ಷಾತೀತ ಮತ್ತು ಧರ್ಮಾತೀತವಾಗಿ ನಡೆಯುತ್ತಿದೆ.
- ಸಿ.ವಿ.ಚಂದ್ರಶೇಖರ್, ಜೆಡಿಎಸ್ ಮುಖಂಡ







