ಬಲ್ಡೋಟಾ ಕಾರ್ಖಾನೆ ವಿಸ್ತರಣೆ ವಿರೋಧಿಸಿ ಕೊಪ್ಪಳ-ಭಾಗ್ಯನಗರ ಬಂದ್ ಯಶಸ್ವಿ
ಒಂದು ವರ್ಷದಿಂದ ನಡೆಯುತ್ತಿರುವ ಹೋರಾಟ: ಕೆಎಸ್‌ಆರ್‌ಟಿಸಿ ಡಿಪೋ ಎದುರು ಪ್ರತಿಭಟನೆ

ಕೊಪ್ಪಳ: ಬಲ್ಡೋಟಾ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶನಿವಾರ ಕೊಪ್ಪಳ-ಭಾಗ್ಯನಗರ ಬಂದ್ ನಡೆಸಲಾಯಿತು.
ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಉದ್ದೇಶದಿಂದ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಿತ್ತು. ಇದಕ್ಕೆ ನಗರದ ವ್ಯಾಪಾರಸ್ಥರು, ಶಿಕ್ಷಣ ಸಂಸ್ಥೆಗಳು, ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ಬೆಂಬಲ ವ್ಯಕ್ತವಾಯಿತು.
ಬೆಳಗ್ಗೆಯಿಂದಲೇ ಕೊಪ್ಪಳ ಮತ್ತು ಭಾಗ್ಯನಗರದ ಬಹುತೇಕ ಅಂಗಡಿ-ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು ಹಾಗೂ ತರಕಾರಿ ಮಾರುಕಟ್ಟೆ ಬಂದ್ ಆಗಿದ್ದವು. ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ನಗರದ ಖಾಸಗಿ ಶಾಲೆಗಳೂ ರಜೆ ಘೋಷಿಸುವ ಮೂಲಕ ಬಂದ್‌ಗೆ ಕೈಜೋಡಿಸಿದವು. ಪ್ರಮುಖ ರಸ್ತೆಗಳಲ್ಲಿ ಜನಸಂಚಾರ ವಿರಳವಾಗಿತ್ತು.
ಕೆಎಸ್ಸಾರ್ಟಿಸಿ ಡಿಪೋ ಎದುರು ಪ್ರತಿಭಟನೆ:
ಶನಿವಾರ ಬೆಳಗ್ಗೆಯಿಂದ ಸ್ಥಗಿತಗೊಂಡಿದ್ದ ಬಸ್ ಮತ್ತು ಆಟೋ ಸಂಚಾರವನ್ನು 10 ಗಂಟೆ ಸುಮಾರಿಗೆ ಪುನಾರಂಭಿಸಲಾಗಿತ್ತು. ಈ ನಡುವೆ ಸರ್ಕಾರಿ ಬಸ್‌ಗಳ ಸಂಚಾರ ಆರಂಭವಾಗಿದ್ದಕ್ಕೆ ಕೆರಳಿದ ಪ್ರತಿಭಟನಾಕಾರರು ಕೆಎಸ್ಸಾರ್ಟಿಸಿ ಡಿಪೋ ಎದುರು ದಿಢೀರ್ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಬಸ್ ಸಂಚಾರವನ್ನು ಸ್ಥಗಿತಗೊಳಿಸಿದರು. ಇದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿತ್ತು.
ಕಳೆದ 2025ರ ಅಕ್ಟೋಬರ್ 31ರಂದು ಬಲ್ಡೋಟಾ ಕಾರ್ಖಾನೆ ಸೇರಿದಂತೆ ತಾಲೂಕು ವ್ಯಾಪ್ತಿಯ ಕೈಗಾರಿಕೆಗಳ ವಿಸ್ತರಣೆ ಮತ್ತು ಪರಿಸರ ಮಾಲಿನ್ಯ ವಿರೋಧಿಸಿ ಆರಂಭಗೊಂಡ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ನಿನ್ನೆ ಒಂದು ವರ್ಷ ಪೂರ್ಣಗೊಳಿಸಿತ್ತು. ಕಾರ್ಖಾನೆಗಳಿಂದ ಹೊರ ಸೂಸುವ ಧೂಳು, ಹೊಗೆ ಹಾಗೂ ಇತರೆ ಮಾಲಿನ್ಯಕಾರಕಗಳಿಂದ ಸುತ್ತಮುತ್ತಲಿನ ಗ್ರಾಮಗಳ ಜನರ ಆರೋಗ್ಯ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ.
ಮೆರವಣಿಗೆ ಹಾಗೂ ಪ್ರತಿಭಟನೆಯಲ್ಲಿ ರೈತರು, ಮಹಿಳೆಯರು, ಯುವಕರು, ವಿವಿಧ ಸಂಘಟನೆಗಳ ಮುಖಂಡರು, ಮಠಾಧೀಶರು ಹಾಗೂ ಪರಿಸರ ಹೋರಾಟಗಾರರು ಪಾಲ್ಗೊಂಡಿದ್ದರು. ಬಲ್ಡೋಟಾ ಕಾರ್ಖಾನೆ ವಿಸ್ತರಣೆ ತಡೆಯಬೇಕು, ಕೈಗಾರಿಕಾ ಮಾಲಿನ್ಯ ನಿಯಂತ್ರಿಸಬೇಕು ಹಾಗೂ ಜನರ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಗೆ ಸರ್ಕಾರ ಆದ್ಯತೆ ನೀಡಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.
ವೇದಿಕೆಯಲ್ಲಿ ಮೈನಳ್ಳಿ ಸಿದ್ದೇಶ್ವರ ಶಿವಚಾರ್ಯ ಮಹಾಸ್ವಾಮೀಜಿಗಳು, ಶ್ರೀ ಸಿದ್ದಬಸವ ಸ್ವಾಮೀಜಿಗಳು, ಕಪ್ಪತ್ತಗುಡ್ಡ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದರು. ಪರಿಷತ್ ಸದಸ್ಯೆ ಹೇಮಲತಾ ನಾಯಕ, ಕೆಆರ್‌ಎಸ್ ಪಕ್ಷದ ರಾಜ್ಯಧ್ಯಕ್ಷ ರವಿ ಕೃಷ್ಣಾರಡ್ಡಿ,ಅಮರೇಗೌಡ ಪಾಟೀಲ, ಚಳ್ಳಿಕೇರಿ ಕವಿ ಶಿವಲಿಂಗಪ್ಪ,ಹಿರಿಯ ನ್ಯಾಯವಾದಿ ಸಂಧ್ಯಾ ಮಾದಿನೂರು, ಪ್ರಕಾಶ ಆನಂದಳ್ಳಿ, ಕಾವ್ಯ ಗಡಾದ, ನಟ ಚೇತನ ಅಹಿಂಸಾ, ಸಾವಿತ್ರಿ ಮುಜುಂದಾರ, ರಾಜು ಬಾಕಳೆ, ಅಲ್ಲಮಪ್ರಭು ಬೆಟ್ಟದೂರು, ಕೆ.ಬಿ. ಗೋನಾಳ, ಎ.ವಿ. ಕಣವಿ, ಡಾ. ಬಸವರಾಜ ಸಬರದ, ಈರಪ್ಪ ಕಂಬಳಿ, ಗಾಳೆಪ್ಪ ಕಡೇನಿ,ಡಿ.ಎಂ. ಬಡಿಗೇರ, ರಮೇಶ ಹ್ಯಾಟಿ, ಬಸವರಾಜ ಬಳ್ಳೊಳ್ಳಿ, ಮಂಜುನಾಥ್ ಗೊಂಡಬಾಳ ಮತ್ತು ಭೀಮಸೇನ ಸೆರಿದಂತೆ ಇತರರು ಉಪಸ್ಥಿರಿದ್ದರು.






