Koppal | ಬೆಳೆ ಹಾನಿ ಪ್ರದೇಶಕ್ಕೆ ಬಿಜೆಪಿ ನಾಯಕರ ಭೇಟಿ

ಕೊಪ್ಪಳ: ಜಿಲ್ಲೆಯ ವಿವಿಧೆಡೆ ಸುರಿದ ಅಕಾಲಿಕ ಮಳೆಯಿಂದ ಹಾನಿಗೊಳಗಾದ ತೋಟಗಾರಿಕೆ ಹಾಗೂ ಕೃಷಿ ಬೆಳೆ ಬೆಳೆದ ರೈತರಿಗೆ ಸರ್ಕಾರ ಕೂಡಲೇ ಪ್ರತಿ ಎಕರೆಗೆ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಜಿಲ್ಲಾ ಬಿಜೆಪಿ ನಾಯಕರು ಒತ್ತಾಯಿಸಿದರು.
ತಾಲೂಕಿನ ಹೊಸಹಳ್ಳಿ, ಮುದ್ದಾಬಳ್ಳಿ ಹಾಗೂ ಹ್ಯಾಟಿ ಗ್ರಾಮಗಳ ರೈತರ ಹೊಲಗಳಿಗೆ ಭೇಟಿ ನೀಡಿದ ಬಿಜೆಪಿ ಮುಖಂಡರು, ಮಳೆಯಿಂದ ಹಾಳಾಗಿರುವ ಬಾಳೆ, ಕಬ್ಬು ಹಾಗೂ ಇತರೆ ಬೆಳೆಗಳ ಸ್ಥಿತಿಯನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೊಪ್ಪಳ ಲೋಕಸಭಾ ಕ್ಷೇತ್ರದ ನಿಕಟಪೂರ್ವ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್, ರೈತರು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಬೆಳೆದ ಬೆಳೆ ಕೈಗೆ ಬರುತ್ತದೆ ಎನ್ನುವಷ್ಟರಲ್ಲಿ ಅಕಾಲಿಕ ಮಳೆಯಿಂದ ಸಂಪೂರ್ಣ ಹಾನಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
“ಸರ್ಕಾರ ಎಕರೆಗೆ ಕೇವಲ 22,500 ರೂ. ಪರಿಹಾರ ನೀಡಲು ಮುಂದಾಗಿದೆ. ಆದರೆ ಅದು ರೈತರ ನಷ್ಟಕ್ಕೆ ತಕ್ಕ ಪರಿಹಾರವಲ್ಲ. ಕನಿಷ್ಠ ಎಕರೆಗೆ 5 ಲಕ್ಷ ರೂ. ಪರಿಹಾರ ನೀಡಬೇಕು” ಎಂದು ಅವರು ಆಗ್ರಹಿಸಿದರು.
ಅನೇಕ ರೈತರು ವರ್ಷಕ್ಕೆ ಸುಮಾರು 1.5 ಲಕ್ಷ ರೂ.ಗೆ ಗುತ್ತಿಗೆ ಆಧಾರದ ಮೇಲೆ ಹೊಲ ಪಡೆದು ಕೃಷಿ ಮಾಡಿದ್ದು, ಬೆಳೆ ಬೆಳೆಸಲು ಮತ್ತಷ್ಟು 2 ಲಕ್ಷ ರೂ.ವರೆಗೆ ಖರ್ಚು ಮಾಡಿದ್ದಾರೆ. ಹೀಗಾಗಿ ಸರ್ಕಾರ ಘೋಷಿಸಿರುವ ಪರಿಹಾರ ಯಾವುದೇ ರೀತಿಯಲ್ಲೂ ಸಮರ್ಪಕವಾಗುವುದಿಲ್ಲ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಅಕಾಲಿಕ ಮಳೆಯಿಂದ ರೈತರು ಬೆಳೆದ ತೋಟಗಾರಿಕೆ ಬೆಳೆಗಳು ಸಂಪೂರ್ಣ ಹಾಳಾಗಿವೆ. ರೈತರ ಸಂಕಷ್ಟ ನೋಡಲು ಆಗುತ್ತಿಲ್ಲ. ಅನ್ನದಾತರ ಕಷ್ಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸಿ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿದರು.
ಮೂರು ತಿಂಗಳ ಹಿಂದೆ ಬಸಾಪೂರ ಬಳಿ ಕಾಲುವೆ ಒಡೆದು ಭತ್ತದ ಬೆಳೆ ಹಾನಿಯಾದರೂ ಈವರೆಗೆ ರೈತರಿಗೆ ಪರಿಹಾರ ಸಿಕ್ಕಿಲ್ಲ. ಈಗಲೂ ಅದೇ ಪರಿಸ್ಥಿತಿ ಮರುಕಳಿಸಬಾರದು ಎಂದು ಎಚ್ಚರಿಸಿದರು.
“ಶಾಸಕ ಹಿಟ್ನಾಳ್ ಕೇವಲ ಕಾಟಾಚಾರಕ್ಕೆ ಬೆಳೆ ಹಾನಿ ವೀಕ್ಷಣೆ ಮಾಡುವುದಲ್ಲ, ಸರ್ಕಾರದಿಂದ ಪರಿಹಾರ ಕೊಡಿಸುವತ್ತ ಮೊದಲ ಆದ್ಯತೆ ನೀಡಬೇಕು. ಇಲ್ಲದಿದ್ದರೆ ರೈತರು ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಲಿದೆ. ರೈತರೊಂದಿಗೆ ನಾವು ಕೂಡ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ” ಎಂದು ಡಾ. ಬಸವರಾಜ ಕ್ಯಾವಟರ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಹಾಗೂ ನಗರ ಮಂಡಲದ ಬಿಜೆಪಿ ಅಧ್ಯಕ್ಷ ವೀರೇಶ ಸಜ್ಜನ್ ಹಾಗೂ ಅಮರೇಶ ಮುರುಳಿ, ಮುಖಂಡರಾದ ಅಪ್ಪಣ್ಣ ಪದಕಿ, ಮಹಾಂತೇಶ್ ಪಾಟೀಲ್ ಮೈನಳ್ಳಿ, ಚಂದ್ರಶೇಖರ ಕವಲೂರ್, ಹಲವರ್ತಿ ವೆಂಕಟೇಶ್, ಗಣೇಶ ಹೊರತಟ್ನಾಳ್, ಪ್ರದೀಪ್ ಹಿಟ್ನಾಳ್, ರಮೇಶ ಕವಲೂರ್, ಯೋಗಾನಂದ ಲೇಬಗೇರಿ, ಚನ್ನಬಸವ ಗಾಳಿ, ಗವಿ ಹಲವರ್ತಿ , ಮಾರುತಿ ಹಡಪದ, ಗುರಪ್ಪ, ದೇವರಾಜ ಹಾಲಸಮುದ್ರ, ಸಿದ್ದನಗೌಡ ಪಾಟೀಲ್ ಹಾಗೂ ಸ್ಥಳೀಯರು ಸೇರಿದಂತೆ ನೂರಾರು ರೈತರು ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರಿದ್ದರು.






