ಕೊಪ್ಪಳ| ಹಸುವಿನ ಕಾಲು ಕತ್ತರಿಸಿದ ಆರೋಪಿ ವಿರುದ್ಧ ಪ್ರಕರಣ ದಾಖಲು

ಕೊಪ್ಪಳ: ಹೊಲಕ್ಕೆ ಮೇಯಲು ಬಂದ ಹಸುವಿನ ಕಾಲು ಕತ್ತರಿಸಿದ ಆರೋಪಿ ವಿರುದ್ಧ ಕೊಪ್ಪಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿಂಗಲಬಂಡಿ ಗ್ರಾಮದ ರಮೇಶಪ್ಪ ಹಡಪದ ವಿರುದ್ಧ ಪ್ರಕರಣ ದಾಖಲಾಗಿದೆ.
ಮಾಟರಂಗಿ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ದೇವಸ್ಥಾನಕ್ಕೆ ಸೇರಿದ ಹಸು ತನ್ನ ಹೊಲದಲ್ಲಿ ಬಂದು ಬೆಳೆ ತಿಂದು ಹಾಳು ಮಾಡುತ್ತಿದೆ ಎಂದು ಕೋಪಗೊಂಡು ರಮೇಶಪ್ಪ ಕೊಡಲಿಯಿಂದ ಹಸುವಿನ ಬಲಗಾಲನ್ನು ಕತ್ತರಿಸಿದ್ದಾನೆ. ಗಂಭೀರ ಸ್ಥಿತಿಯಲ್ಲಿದ್ದ ಹಸುವಿಗೆ ಹಿರೇಹರಳ್ಳಿ ಗ್ರಾಮದ ಪಶು ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿದ್ದರು. ಆದರೆ ಕೆಲ ದಿನಗಳ ನಂತರ ಹಸು ಮೃತಪಟ್ಟಿದೆ.
ಈ ಕುರಿತು ಶರಣಪ್ಪ ಮ್ಯಾಗೇರಿ ಎಂಬವರು ದೂರು ನೀಡಿದ್ದರು. ಈ ಕುರಿತು ಯಲಬುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಕಳು ಮೃತಪಟ್ಟ ಕಾರಣ ಕೊಪ್ಪಳ ಪಶುಪಾಲನಾ ಮತ್ತು ಪಶು ವೈದ್ಯಸೇವಾ ಇಲಾಖೆಯ ಉಪನಿರ್ದೇಶಕರು ಕೊಪ್ಪಳ ಎಸ್‌ಪಿ ಅವರಿಗೆ ಪತ್ರ ಬರೆದು ಆರೋಪಿಯ ಮೇಲೆ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020ರ ಅಡಿಯಲ್ಲಿ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.





