Koppal | ದ್ವೇಷ, ಅಸೂಯೆ ಬಿಟ್ಟು ಸದ್ಗುಣಗಳನ್ನು ಅಳವಡಿಸಿಕೊಳ್ಳಿ: ಡಾ.ಪ್ರಭುರಾಜು ನಾಯಕ

ಕೊಪ್ಪಳ: ಮಹರ್ಷಿ ವಾಲ್ಮೀಕಿ ಒಬ್ಬ ತತ್ವಜ್ಞಾನಿಯಾಗಿದ್ದು, ಅವರು ನಮಗೆ ಆದರ್ಶದ ಪರಿಕಲ್ಪನೆಯನ್ನು ಕಟ್ಟಿಕೊಟ್ಟಿದ್ದಾರೆ. ಎಲ್ಲರೂ ದ್ವೇಷ, ಅಸೂಯೆಗಳನ್ನು ಬಿಟ್ಟು ಸದ್ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಮಂಗಳೂರಿನ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಪ್ರಭುರಾಜು ನಾಯಕ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರ ಒಕ್ಕೂಟ ಹಾಗೂ ಸರ್ಕಾರಿ ನೌಕರರ ಸಂಘದ ಸಂಯುಕ್ತ ಆಶ್ರಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಭಕ್ತಿ ಚಿಂತನ ಮಂಥನ ಸಭೆಯಲ್ಲಿ ಅವರು ಮಾತನಾಡಿದರು.
ದಲಿತರು ಗುಲಾಮರಂತೆ ಜೀವನ ನಡೆಸಬಾರದು. ಎಲ್ಲರೂ ಒಗ್ಗಟ್ಟಾಗಬೇಕು. ಆಗ ಭಾರತದ ರಾಜಕೀಯ ಸ್ಥಿತಿಯಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ. ಹೋರಾಟದ ಮೂಲಕ ಮಾತ್ರ ಸೌಲಭ್ಯಗಳನ್ನು ಪಡೆಯಲು ಸಾಧ್ಯ. ದಲಿತರಲ್ಲಿ ಸೇವಾ ಮನೋಭಾವ, ಶಾಂತಿ ಮತ್ತು ಸಹನೆ ಇವೆ. ಎಲ್ಲರೂ ವೈಜ್ಞಾನಿಕ ಮನೋಭಾವ, ವೈಚಾರಿಕತೆ ಹಾಗೂ ಪ್ರಜ್ಞಾವಂತಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಪ್ರಾಧ್ಯಾಪಕ ಹಾಗೂ ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಗವಿಸಿದ್ದಪ್ಪ ಮುತ್ತಾಳ ಮಾತನಾಡಿ, ಶಿಕ್ಷಣ ಪಡೆದು ಸಂಘಟಿತರಾಗಿ ಹೋರಾಟ ಮಾಡಬೇಕು. ಮಹನೀಯರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಉನ್ನತ ಶಿಕ್ಷಣದ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕು. ಕ್ರಿಯಾಶೀಲತೆ, ತ್ಯಾಗ ಹಾಗೂ ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಸಮಾಜಕ್ಕೆ ನಮ್ಮ ಕೊಡುಗೆ ನೀಡುವ ಮೂಲಕ ಋಣ ತೀರಿಸೋಣ ಎಂದು ಹೇಳಿದರು.
ಪ್ರಾಧ್ಯಾಪಕ ಡಾ. ಮಂಜುನಾಥ್ ಅರೆಂಟುನೂರು ಮಾತನಾಡಿ, ಮಹರ್ಷಿ ವಾಲ್ಮೀಕಿ ಉನ್ನತ ವ್ಯಕ್ತಿತ್ವದ ಮಹನೀಯರಾಗಿದ್ದಾರೆ. ನಮ್ಮ ಸಂಘಟನೆಯನ್ನು ಬಲಪಡಿಸಬೇಕು. ನಮ್ಮ ಜನಾಂಗದ ಬದುಕು ಮತ್ತು ಭವಣೆಗಳ ಕುರಿತು ಚರ್ಚಿಸಬೇಕು. ನಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ಮತ್ತು ಉತ್ತರಗಳನ್ನು ರಾಮಾಯಣ ಗ್ರಂಥದಲ್ಲಿ ಕಾಣಬಹುದು ಎಂದು ಹೇಳಿದರು.
ಶಿಕ್ಷಕ ನಾಗರಾಜ ಕುಷ್ಟಗಿ ಮಾತನಾಡಿ, ನಾವು ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಪ್ರಬಲರಾಗಬೇಕು. ದಲಿತ ಜನಾಂಗದವರು ದೇಶಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ನಾವು ರಾಮನನ್ನು ಪೂಜಿಸುತ್ತೇವೆ. ಆದರೆ ವಾಲ್ಮೀಕಿಯನ್ನು ಅಪ್ಪಿಕೊಳ್ಳುತ್ತಿಲ್ಲ. ರಾಮಾಯಣ ಮತ್ತು ಮಹಾಭಾರತವನ್ನು ಪ್ರತಿನಿತ್ಯ ಪಠಿಸುತ್ತೇವೆ. ಆದರೆ ಆ ಗ್ರಂಥಗಳನ್ನು ರಚಿಸಿದ ಮಹನೀಯರನ್ನು ನೆನೆಯುತ್ತಿಲ್ಲ ಎಂದು ಹೇಳಿದರು.
ಶಿಕ್ಷಕ ಜಗದೀಶ್ ಮಾತನಾಡಿ, ವಾಲ್ಮೀಕಿ ರಾಮಾಯಣದ ಮೂಲಕ ಜನರು ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿತಿದ್ದಾರೆ. ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ರಾಮಾಯಣ ಕಲಿಸಿಕೊಡುತ್ತದೆ ಎಂದರು.
ಜಯತೀರ್ಥ ದೇಸಾಯಿ ಮಾತನಾಡಿ, ರಾಮಾಯಣ ಮತ್ತು ಮಹಾಭಾರತ ಎರಡೂ ಗ್ರಂಥಗಳು ಮಹಿಳೆಯರನ್ನು ಗೌರವಿಸಬೇಕು ಎಂಬ ಮೌಲ್ಯವನ್ನು ಸಮಾಜಕ್ಕೆ ಕಲಿಸಿಕೊಟ್ಟಿವೆ ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಪ್ಪ ಜೋಗಿ ಮಾತನಾಡಿ, ಸೌಲಭ್ಯಗಳಿಂದ ವಂಚಿತರಾದವರ ಕುರಿತು ನಾವು ಆಲೋಚಿಸಬೇಕು. ವಾಲ್ಮೀಕಿಯವರು ನಾಗರಿಕ ಬದುಕಿನ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ಚಿಂತನ ಮಂಥನ ಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರ ಒಕ್ಕೂಟದ ಉಪಾಧ್ಯಕ್ಷ ಹನುಮಂತಪ್ಪ ಚಲುವಾದಿ, ನಿವೃತ್ತ ಶಿಕ್ಷಕರಾದ ಶರಣಪ್ಪ ಗೌಡ ಹ್ಯಾಟಿ, ಅಂದಪ್ಪ, ಶ್ರೀಪತಿ, ಸೋಮರೆಡ್ಡಿ, ವೆಂಕಟೇಶ್, ರಮೇಶ್, ರಾಮಣ್ಣ ಶ್ಯಾವಿ, ಬಲರಾಮ್, ಮೋಹನ್, ಮಲ್ಲಪ್ಪ ಹವಳಿ, ಯಮನೂರಪ್ಪ, ರಾಮಣ್ಣ ಕಳ್ಳಿಮನಿ, ಮಾರುತಿ ಅರೆರ್ ಹಾಗೂ ನರಸಿಂಹ ಉಪಸ್ಥಿತರಿದ್ದರು.
ಶಿಕ್ಷಕ ಪ್ರಾಣೇಶ್ ಪೂಜಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.






