ಕೊಪ್ಪಳ: ಗಣೇಶ ವಿಸರ್ಜನೆ ವೇಳೆ ಗಲಾಟೆ; ಮೂವರಿಗೆ ಚಾಕು ಇರಿತ

ಕೊಪ್ಪಳ: ಗಣೇಶ ವಿಸರ್ಜನೆ ವೇಳೆ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಮೂವರಿಗೆ ಚಾಕುವಿನಿಂದ ಇರಿದ ಘಟನೆ ಗಂಗಾವತಿ ತಾಲೂಕಿನ ಆರಾಳ ಗ್ರಾಮದಲ್ಲಿ ನಡೆದಿದೆ.
ಜಯಪ್ರಕಾಶ್, ಗುರುಪ್ರಕಾಶ್ ಹಾಗೂ ದೊಡ್ಡಬಸವ ಗಾಯಗೊಂಡವರು. ದೊಡ್ಡಬಸವ ಅವರನ್ನು ಗಂಗಾವತಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಯಪ್ರಕಾಶ್ ಹಾಗೂ ಗುರುಪ್ರಕಾಶ್ ಅವರ ಹೊಟ್ಟೆಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ:
ಆರಾಳ ಗ್ರಾಮದಲ್ಲಿ ರವಿವಾರ 14ನೇ ದಿನದ ಗಣೇಶ ವಿಸರ್ಜನಾ ಮೆರವಣಿಗೆ ಆಯೋಜಿಸಲಾಗಿತ್ತು. ಈ ವೇಳೆ ಗ್ರಾಮದ ಕೆಲ ಯುವಕರು ಧ್ವನಿವರ್ಧಕ (ಡಿಜೆ) ಅಳವಡಿಸಿದ್ದ ವಾಹನದ ಮೇಲೆ ಹತ್ತಿ ಕುಣಿಯುತ್ತಿದ್ದರು. ಭದ್ರತೆಯ ದೃಷ್ಟಿಯಿಂದ ಜಯಪ್ರಕಾಶ್ ಹಾಗೂ ಅವರ ಕಡೆಯವರು ವಾಹನದ ಮೇಲಿದ್ದವರನ್ನು ಕೆಳಗೆ ಇಳಿಸಿದ್ದರು. ಇದೇ ವಿಚಾರವಾಗಿ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿತ್ತು.
ರವಿವಾರದ ಘಟನೆಯನ್ನೇ ಮನಸ್ಸಿನಲ್ಲಿಟ್ಟುಕೊಂಡು ಹಗೆ ಸಾಧಿಸುತ್ತಿದ್ದ ಯುವಕರ ಗುಂಪು ಸೋಮವಾರ ಮತ್ತೆ ಜಗಳ ತೆಗೆದಿದೆ ಎನ್ನಲಾಗಿದೆ. ವಾಗ್ವಾದ ತಾರಕಕ್ಕೇರಿದಾಗ ಏಕಾಏಕಿ ಮಾರಕಾಸ್ತ್ರಗಳನ್ನು ಹೊರತೆಗೆದ ದುಷ್ಕರ್ಮಿಗಳು, ಜಯಪ್ರಕಾಶ್ ಹಾಗೂ ಅವರ ಗುಂಪಿನವರ ಮೇಲೆ ಮುಗಿಬಿದ್ದು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
ಘಟನೆಯ ಕುರಿತು ಗಂಗಾವತಿ ಗ್ರಾಮೀಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






