Koppal | ಮಾರ್ಚ್ 2027ರೊಳಗೆ ಕುಷ್ಟಗಿ 400 ಕೆವಿ ಉಪಕೇಂದ್ರ ಕಾಮಗಾರಿ ಪೂರ್ಣಗೊಳಿಸಿ: ಕೆಪಿಟಿಸಿಎಲ್ ಎಂಡಿ ಸೂಚನೆ

ಕೊಪ್ಪಳ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ವ್ಯವಸ್ಥಾಪಕ ನಿರ್ದೇಶಕ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರು ಕುಷ್ಟಗಿಯಲ್ಲಿ ನಿರ್ಮಾಣವಾಗುತ್ತಿರುವ 400 ಕೆವಿ (ಇಎಚ್‌ವಿ) ವಿದ್ಯುತ್ ಉಪಕೇಂದ್ರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತಿರುವ ನವೀಕರಿಸಬಹುದಾದ ಹಸಿರು ಇಂಧನವನ್ನು ರಾಜ್ಯ ಹಾಗೂ ದೇಶದ ಇತರೆ ಭಾಗಗಳಿಗೆ ಸಮರ್ಪಕವಾಗಿ ರವಾನಿಸಲು ಕುಷ್ಟಗಿಯ 400 ಕೆವಿ ಉಪಕೇಂದ್ರ ಮಹತ್ವದ ಪಾತ್ರ ವಹಿಸಲಿದ್ದು, ಕಾಮಗಾರಿಯನ್ನು ಮಾರ್ಚ್ 2027ರೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಅವರು, ಉಪಕೇಂದ್ರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಡೋಣಿ-ಕುಷ್ಟಗಿ ಫೀಡರ್ ಮಾರ್ಗ ಅತ್ಯಂತ ಪ್ರಮುಖವಾಗಿದೆ ಎಂದು ತಿಳಿಸಿದರು.
ಈ ಮಾರ್ಗವು ಹಸಿರು ಇಂಧನ ಸಾಗಣೆಯ ಜೀವನಾಡಿಯಾಗಿದ್ದು, ಪ್ರಸರಣ ಮಾರ್ಗದ ಕಾಮಗಾರಿಗೆ ಕೆಲವೆಡೆ ರೈಟ್ ಆಫ್ ವೇ (ಆರ್‌ಒಡಬ್ಲ್ಯು) ಹಾಗೂ ಭೂ ಸಮಸ್ಯೆಗಳು ಅಡ್ಡಿಯಾಗಿವೆ. ಈ ಎಲ್ಲ ಅಡೆತಡೆಗಳನ್ನು ನಿವಾರಿಸಲು ಎಂಜಿನಿಯರಿಂಗ್ ತಂಡಗಳಿಗೆ ಮೂರು ತಿಂಗಳ ಗಡುವು ನೀಡಲಾಗಿದೆ ಎಂದು ಹೇಳಿದರು.
ಭೂಮಿ ಮತ್ತು ಆರ್‌ಒಡಬ್ಲ್ಯು ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಅಗತ್ಯವಿರುವ ಆಡಳಿತಾತ್ಮಕ ಹಾಗೂ ಪೊಲೀಸ್ ಸಹಕಾರ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ ಅವರು, ಡೋಣಿಯಿಂದ ಕುಷ್ಟಗಿವರೆಗಿನ ವಿದ್ಯುತ್ ಮಾರ್ಗ ಪೂರ್ಣಗೊಂಡ ಬಳಿಕವೇ ಉಪಕೇಂದ್ರ ಕಾರ್ಯಾರಂಭ ಸಾಧ್ಯವಾಗಲಿದೆ ಎಂದು ಸ್ಪಷ್ಟಪಡಿಸಿದರು.
ಕುಷ್ಟಗಿ ಉಪಕೇಂದ್ರವು ಸ್ಥಳೀಯ ಸೌರ ಮತ್ತು ಪವನ ವಿದ್ಯುತ್ ಸ್ಥಾವರಗಳಿಂದ ಉತ್ಪಾದನೆಯಾಗುವ ಬೃಹತ್ ಪ್ರಮಾಣದ ಹಸಿರು ಇಂಧನವನ್ನು ರಾಜ್ಯದ ಮುಖ್ಯ ವಿದ್ಯುತ್ ಜಾಲಕ್ಕೆ ಸಂಪರ್ಕಿಸುವ ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದ ಅಭಿವೃದ್ಧಿಗೆ ಇಂತಹ ಪ್ರಸರಣ ಯೋಜನೆಗಳ ತ್ವರಿತ ಅನುಷ್ಠಾನ ಅಗತ್ಯವಾಗಿದ್ದು, ಕುಷ್ಟಗಿ 400 ಕೆವಿ ಉಪಕೇಂದ್ರ ಹಾಗೂ ಡೋಣಿ-ಕುಷ್ಟಗಿ ಪ್ರಸರಣ ಮಾರ್ಗ ಕಲ್ಯಾಣ ಕರ್ನಾಟಕ ಭಾಗದ ವಿದ್ಯುತ್ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಲಿವೆ ಎಂದು ಹೇಳಿದರು.
ಕೆಪಿಟಿಸಿಎಲ್ ಹಾಗೂ ಜಿಲ್ಲಾಡಳಿತದ ಸಮನ್ವಯದೊಂದಿಗೆ ಯೋಜನೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಹಸಿರು ಇಂಧನ ಆಧಾರಿತ ಭವಿಷ್ಯ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.






