ಕೊಪ್ಪಳ | ಗುತ್ತಿಗೆದಾರರು ಕೆಲಸ ಕೊರತೆಯಿಂದ ಸಂಕಷ್ಟ : ಪ್ಯಾಕೇಜ್ ಟೆಂಡರ್ ನಿಲ್ಲಿಸುವಂತೆ ಆಗ್ರಹ

ಕೊಪ್ಪಳ : ಜಿಲ್ಲೆಯಲ್ಲಿ ಎಸ್‌ಸಿ, ಎಸ್‌ಟಿ, ಕ್ಲಾಸ್ 1 ಮತ್ತು ಕ್ಲಾಸ್ 2 ಹಾಗೂ ಮಧ್ಯಮ ವರ್ಗದ ಗುತ್ತಿಗೆದಾರರು ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘದ ಜಿಲ್ಲಾ ಅಧ್ಯಕ್ಷ ಸುರೇಶ್ ಭೂಮರೆಡ್ಡಿ ತಿಳಿಸಿದ್ದಾರೆ.
ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು ಕೊಪ್ಪಳದ ಕೆಲವು ಕಾಣದ ಕೈಗಳ, ಜನಪ್ರತಿನಿಧಿಗಳ ಸರ್ವಾಧಿಕಾರಿ ಧೋರಣೆ ನಡೆಯುತ್ತಿದ್ದು, ಪ್ರೇರಣ ಎಂಬ ಸಂಸ್ಥೆಯಲ್ಲಿ ಮೆಟೀರಿಯಲ್ ಖರೀದಿ ಮಾಡಬೇಕು ಎಂಬ ನಿಯಮ ಮಾಡಲಾಗಿದೆ ಇದರಿಂದ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶೀಘ್ರವಾಗಿ ಪ್ಯಾಕೇಜ್ ಟೆಂಡರನ್ನು ನಿಲ್ಲಿಸಬೇಕು ಹಾಗೂ ಕೊಪ್ಪಳದ ಲ್ಯಾಂಡ್ ಆರ್ಮಿ ಮತ್ತು ನಿರ್ಮಿತಿ ಕೇಂದ್ರ ಇತರ ಸಂಸ್ಥೆಗಳಿಗೆ ನೀಡುವ ಕೆಲಸಗಳನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ರಾಜ್ಯಮಟ್ಟದ ಮತ್ತು ಜಿಲ್ಲೆಯ ಗುತ್ತಿಗೆದಾರರ ಹೆಸರಿನಲ್ಲಿ ಸ್ಥಳೀಯ ರಾಜಕಾರಣಿಗಳು, ತಮ್ಮ ಹಿಂಬಾಲಕರಿಗೆ ಕೆಲಸವನ್ನು ಕೊಡುತ್ತಿದ್ದು. ಇದರಿಂದ ಕೊಪ್ಪಳ ಜಿಲ್ಲೆಯಲ್ಲಿ ಕಳಪೆ ಕಾಮಗಾರಿಗೆ ದಾರಿ ಮಾಡಿಕೊಟ್ಟಂತಾಗಿದೆ. ಸ್ಥಳೀಯ ಮತ್ತು ಲೈಸೆನ್ಸ್ ಹೊಂದಿದ ಗುತ್ತಿಗೆದಾರರಿಗೆ ನಷ್ಟವಾಗುತ್ತಿದೆ, ಇಂಥ ಹಲವಾರು ಸಮಸ್ಯೆಗಳನ್ನು ಸಾಕಷ್ಟು ಇದ್ದು ರಾಜ್ಯ ಸರ್ಕಾರ ಶೀಘ್ರವಾಗಿ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ತಿಂಗಳು 12 ರಂದು ಕೊಪ್ಪಳ ಜಿಲ್ಲೆಯ ಎಲ್ಲಾ ಗುತ್ತಿಗೆದಾರರು ಎಲ್ಲ ಕಾಮಗಾರಿಗಳನ್ನು ನಿಲ್ಲಿಸುವ ತೀರ್ಮಾನಕ್ಕೆ ಬಂದಿದ್ದೇವೆ. ಜಿಲ್ಲೆಯಲ್ಲಿ ಸುಮಾರು 400 ಜನ ಗುತ್ತಿಗೆದಾರರು ಇದ್ದು, ಇವರಲ್ಲಿ ಕೇವಲ 20-30ಜನರಿಗೆ ಮಾತ್ರ ಕೆಲಸ ಇದೆ ಉಳಿದವರಿಗಿಲ್ಲ, ಮಾಡಿದ ಕಾಮಗಾರಿಗೆ ಬಿಲ್ ಪಾವತಿ ಆಗುತ್ತಿಲ್ಲ. ಇದರಿಂದ ಗುತ್ತಿಗೆದಾರರು ಕಷ್ಟ ಅನುಭವಿಸುತ್ತಿದ್ದಾರೆ. ಗುತ್ತಿಗೆದಾರರ ಹಿತ ದೃಷ್ಟಿಯಿಂದ ಮುಖ್ಯಮಂತ್ರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ನ್ಯಾಯಯುತವಾದ ಬೇಡಿಕೆಗಳಿಗೆ ಸ್ಪಂದಿಸಿ ಜಿಲ್ಲೆಯ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಟೆಂಡರ್ ಕರೆಯ ಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗುತ್ತಿಗೆದಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಪ್ಪ ಅರಕೇರಿ, ಆರ್.ರಾಜಶೇಖರ್, ಎಸ್ಸಿ, ಎಸ್‌ಟಿ, ಗುತ್ತಿಗೆದಾರ್ ಸಂಘದ ಜಿಲ್ಲಾ ಅಧ್ಯಕ್ಷ ಹನುಮೇಶ ಕಡೆಮನಿ, ಗುತ್ತಿಗೆದಾರರಾದ ಶುಕ್ರಾಜ್ ಹಾಳಕೇರಿ, ಯಮನೂರಪ್ಪ ನಡೂಲಮನಿ, ಎಲ್.ಎಂ.ಮಲ್ಲಯ್ಯ, ಸಿ.ವಿ.ಹಳ್ಳಿ, ಕೃಷ್ಣ ಇಟ್ಟಂಗಿ, ರವೀಂದ್ರ ನಂದವಾಡಗಿ, ಮತ್ತಿತರರು ಉಪಸ್ಥಿತರಿದ್ದರು.







