ಕೊಪ್ಪಳ ಜಿಲ್ಲಾ ವಕೀಲರ ಸಂಘದ ಚುನಾವಣೆ: ನೂತನ ಅಧ್ಯಕ್ಷರಾಗಿ ಪ್ರಕಾಶ ಆನಂದಳ್ಳಿ ಆಯ್ಕೆ

ಕೊಪ್ಪಳ: ತೀವ್ರ ಕುತೂಹಲ ಕೆರಳಿಸಿದ್ದ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಚುನಾವಣೆಯ ಮತ ಎಣಿಕೆ ಪೂರ್ಣಗೊಂಡಿದ್ದು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರಕಾಶ ಆನಂದಳ್ಳಿ ಅವರು 114 ಮತಗಳ ಭರ್ಜರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಚುನಾವಣೆಯಲ್ಲಿ ಒಟ್ಟು 11 ಸುತ್ತುಗಳಲ್ಲಿ ಮತ ಎಣಿಕೆ ನಡೆದಿದ್ದು, ಪ್ರತಿ ಸುತ್ತಿನಲ್ಲಿ 50 ಮತಗಳನ್ನು ಎಣಿಸಲಾಯಿತು. ಅಂತಿಮ ಫಲಿತಾಂಶದಲ್ಲಿ ಪ್ರಕಾಶ ಆನಂದಳ್ಳಿ ಅವರು 321 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ, ಪ್ರತಿಸ್ಪರ್ಧಿ ಎಚ್.ಎಚ್. ಮುರುಡಿ ಅವರು 207 ಮತಗಳನ್ನು ಪಡೆದರು. ಮೂರನೇ ಅಭ್ಯರ್ಥಿ ಓಂಕಾರ ಶೆಟ್ಟರ್ ಅವರಿಗೆ 5 ಮತಗಳು ಲಭಿಸಿದ್ದು, 3 ಮತಗಳು ಅಮಾನ್ಯಗೊಂಡಿವೆ.
ಇತರೆ ಪದಾಧಿಕಾರಿಗಳ ಪೈಕಿ ಉಪಾಧ್ಯಕ್ಷರಾಗಿ ಅಂದಾನಗೌಡ್ರ ಮಾಲಿಪಾಟೀಲ್, ಪ್ರಧಾನ ಕಾರ್ಯದರ್ಶಿಯಾಗಿ ಬಿ.ವಿ. ಸಜ್ಜನ್, ಜಂಟಿ ಕಾರ್ಯದರ್ಶಿಯಾಗಿ ಬಸವರಾಜ ಮೇಲುಸಕ್ಕರಿ ಹಾಗೂ ಖಜಾಂಚಿಯಾಗಿ ಶ್ರೀಮತಿ ಪುಷ್ಪಾ ಬೇವೂರ ಆಯ್ಕೆಯಾಗಿದ್ದಾರೆ.
ಈ ಚುನಾವಣೆಯಲ್ಲಿ ಎರಡೂ ಬಣಗಳಿಂದ ತಲಾ ಇಬ್ಬರು ಪದಾಧಿಕಾರಿಗಳು ಆಯ್ಕೆಯಾಗಿದ್ದು, ನೂತನ ಪದಾಧಿಕಾರಿಗಳಿಗೆ ವಕೀಲರು ಅಭಿನಂದನೆ ಸಲ್ಲಿಸಿದರು.




