Koppal | ಕೋತಿ ತಳ್ಳಿದ ಪರಿಣಾಮ ವೃದ್ಧೆ ಮೃತ್ಯು; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಕೊಪ್ಪಳ: ಕೋತಿ ತಳ್ಳಿದ ಪರಿಣಾಮ ಕುಸಿದು ಬಿದ್ದ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ನಗರದಲ್ಲಿ ಸೋಮವಾರ ನಡೆದಿದೆ.
ಮೃತರನ್ನು ನಜಮುನಿಸಾ ಬೇಗಂ ಎಂದು ಗುರುತಿಸಲಾಗಿದೆ.
ಕೊಪ್ಪಳ ನಗರದ ಬಿ.ಟಿ.ಪಾಟೀಲ ನಗರದಲ್ಲಿರುವ ತಮ್ಮ ಮನೆಯ ಅಂಗಳದಲ್ಲಿ ನಿಂತಿದ್ದ ವೇಳೆ ಕೋತಿ ಏಕಾಏಕಿ ಬಂದು ತಳ್ಳಿದ್ದು, ಕೆಳಗೆ ಬಿದ್ದ ನಜಮುನಿಸಾ ಬೇಗಂ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ವೃದ್ಧೆಯನ್ನು ಎತ್ತಲು ಮುಂದಾದ ಮತ್ತೊಬ್ಬ ಮಹಿಳೆಯನ್ನೂ ಕೋತಿ ತಳ್ಳಿದ್ದು, ಅವರು ಕೂಡ ಕೆಳಗೆ ಬಿದ್ದಿದ್ದಾರೆ. ಆದರೆ ಅವರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸ್ಥಳೀಯ ನಿವಾಸಿಗಳು ನಗರದ ಹಲವು ಪ್ರದೇಶಗಳಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೋತಿಗಳು ಬೈಕ್‌ಗಳನ್ನು ಕೆಡವುವುದು, ಹೊರಗೆ ಇಟ್ಟ ಆಹಾರ ಪದಾರ್ಥಗಳನ್ನು ಕೊಂಡೊಯ್ಯುವುದು ಹಾಗೂ ಆಟವಾಡುತ್ತಿರುವ ಮಕ್ಕಳ ಮೇಲೆಯೂ ದಾಳಿ ಮಾಡುವ ಘಟನೆಗಳು ಹೆಚ್ಚಾಗಿವೆ ಎಂದು ಅವರು ದೂರಿದ್ದಾರೆ.
ಮತ್ತೊಂದೆಡೆ, ಮಳೆ ಕೊರತೆಯಿಂದ ಗುಡ್ಡಗಾಡು ಪ್ರದೇಶಗಳಲ್ಲಿ ಕೋತಿಗಳಿಗೆ ಆಹಾರ ಸಿಗದ ಕಾರಣ ಅವು ನಗರ ಪ್ರದೇಶಗಳಿಗೆ ಬರುತ್ತಿವೆ. ಅರಣ್ಯ ಪ್ರದೇಶದಲ್ಲಿಯೇ ಅವುಗಳಿಗೆ ಆಹಾರ ವ್ಯವಸ್ಥೆ ಮಾಡಿದರೆ ನಗರಕ್ಕೆ ಬರುವುದನ್ನು ತಡೆಯಬಹುದು ಎಂಬ ಅಭಿಪ್ರಾಯವನ್ನೂ ಕೆಲವರು ವ್ಯಕ್ತಪಡಿಸಿದ್ದಾರೆ.






