Koppal | ತಂತ್ರಜ್ಞಾನ ಸದ್ಬಳಕೆಯಿಂದ ಉನ್ನತ ಶಿಕ್ಷಣ ಪಡೆಯಿರಿ : ಶಾಸಕ ದೊಡ್ಡನಗೌಡ ಪಾಟೀಲ್

ಕೊಪ್ಪಳ: ಇಂದಿನ ಯುಗದಲ್ಲಿ ಎಲ್ಲ ವ್ಯವಸ್ಥೆಗಳು ಆನ್‌ಲೈನ್ ಆಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಉನ್ನತ ಶಿಕ್ಷಣ ಪಡೆದು ಸಮಾಜಕ್ಕೆ ಕೀರ್ತಿ ತರಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.
ಜಿಲ್ಲೆಯ ಹನುಮಸಾಗರ ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ದೇವಾಂಗ ಸಮಾಜ, ಡಾ.ಎಸ್.ಜಿ.ಬಿಜ್ಜಳ ಸ್ಮಾರಕ ಪ್ರತಿಷ್ಠಾನ, ಜಿಲ್ಲಾ ದೇವಾಂಗ ಕ್ಷೇಮಾಭಿವೃದ್ಧಿ ಸಂಘ, ಜಿಲ್ಲಾ ದೇವಾಂಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕುಷ್ಟಗಿ ತಾಲೂಕು ದೇವಾಂಗ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ 5 ಲಕ್ಷ ರೂ. ಅನುದಾನ ನೀಡುವುದಾಗಿ ಘೋಷಿಸಿದ ಅವರು, ದೇವಾಂಗ ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ತಮ್ಮ ಸಂಪೂರ್ಣ ಬೆಂಬಲ ಮುಂದುವರಿಯಲಿದೆ ಎಂದರು. ಸಮಾಜದ ಕಲ್ಯಾಣ ಮಂಟಪ ನಿರ್ಮಾಣಕ್ಕೂ ಅಗತ್ಯ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಜಿಲ್ಲಾ ದೇವಾಂಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಶಂಕರ ಕರಡಕಲ್ ಮಾತನಾಡಿ, ಪ್ರತಿಭಾ ಪುರಸ್ಕಾರ, ಸಾಧಕರ ಸನ್ಮಾನ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಜಿಲ್ಲಾಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಸಮಾಜದ ಪ್ರತಿಭಾವಂತರನ್ನು ಗುರುತಿಸಿ ಗೌರವಿಸುವುದರ ಜೊತೆಗೆ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪ್ರತಿಯೊಬ್ಬರೂ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ. ಮಹೇಶ್ ಮಾತನಾಡಿ, ನೇಕಾರರ ಬದುಕು ಸಂಕಷ್ಟದಲ್ಲಿದ್ದು, ಯುವಕರು ಉತ್ತಮ ಶಿಕ್ಷಣ ಪಡೆದು ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು. ಸಮಾಜದ ಅಗತ್ಯ ಕಾರ್ಯಗಳಿಗೆ ತಾವು ಸದಾ ಸಹಕಾರ ನೀಡುವುದಾಗಿ ತಿಳಿಸಿದರು.
ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಮಾತನಾಡಿ, ಸಮಾಜ ಸಂಘಟಿತವಾದರೆ ಯಾವುದೇ ಗುರಿ ಸಾಧಿಸಬಹುದು. ಶಿಕ್ಷಣವೇ ಸಮಾಜದ ಪ್ರಗತಿಯ ಪ್ರಮುಖ ಸಾಧನವಾಗಿದ್ದು, ಜಿಲ್ಲೆಯಲ್ಲಿ ದೇವಾಂಗ ಸಮಾಜಕ್ಕೆ ಪ್ರತ್ಯೇಕ ವಸತಿ ನಿಲಯ ಸ್ಥಾಪಿಸುವ ಉದ್ದೇಶ ಹೊಂದಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದೇವಾಂಗ ಸಮಾಜದ ಜಗದ್ಗುರು ದಯಾನಂದ ಪುರಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖಂಡರಾದ ಬಸವರಾಜ ಹಳ್ಳೂರ, ಶಿವಶಂಕರ ಚೆನ್ನಿ, ನಾರಾಯಣಪ್ಪ ಕೊಳ್ಳಿ, ಶಂಕ್ರಪ್ಪ ಸಿನ್ನೂರ, ಶಿವನಗೌಡ ಪಾಟೀಲ, ವಿಶ್ವನಾಥ ಯಾಳಗಿ, ಚಂದ್ರಶೇಖರ ಬೆಟಗೇರಿ, ಧರ್ಮಜ್ಜ ಕುದರಿಮೊತಿ, ಬಸವಂತಪ್ಪ ಸಿಂಹಾಸನ, ಹನುಮಂತಗೌಡ ಗಾಳಿ, ಪ್ರಲ್ಹಾದಗೌಡ ಮೆದಿಕೇರಿ, ರಾಘವೇಂದ್ರ ಕೊಂಡಕುಂದಿ, ಕೆ.ಮಹೇಶ್, ಮೋಹನ್ ಹುಲಮನಿ, ಪಂಪಾಪತಿ ಅರಳಿಕಟ್ಟಿ, ವಿರೇಶ ಅರಳಿಕಟ್ಟಿ, ಶ್ರೀನಿವಾಸ ಕಂಟ್ಲಿ ಸೇರಿದಂತೆ ಸಮಾಜದ ಮುಖಂಡರು, ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳಿದ್ದರು.






