Koppal | ಅದ್ದೂರಿಯಾಗಿ ನಡೆದ ಶ್ರೀಗವಿಮಠ ಮಹಾರಥೋತ್ಸವ

ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದೇ ಹೆಸರಾದ ಗವಿಮಠದ ಶ್ರೀ ಗವಿಸಿದ್ದೇಶ್ವರರ ಮಹಾರಥೋತ್ಸವವು ಪ್ರತಿವರ್ಷದಂತೆ ಈ ವರ್ಷವೂ ಗೋಧೂಳಿ ಸಮಯಕ್ಕೆ ಸಂಭ್ರಮ, ಸಡಗರದಿಂದ ಜರುಗಿದ್ದು, ಲಕ್ಷಾಂತರ ಭಕ್ತರು ಸಾಕ್ಷಿಯಾದರು.
ಗವಿಮಠದ ಗದ್ದುಗೆಯಲ್ಲಿದ್ದ ಶ್ರೀಗವಿಸಿದ್ದೇಶ್ವರ ಮೂರ್ತಿಯನ್ನು ಪಲ್ಲಕ್ಕಿಯ ಮೂಲಕ ಅಭಿನವ ಗವಿಶ್ರೀಗಳ ನೇತೃತ್ವದಲ್ಲಿ ಕಂಸಾಳೆ ವಾದ್ಯಗಳಿಗೆ ತಕ್ಕಂತೆ ನಂದಿಕೋಲು ನೃತ್ಯದ ಮೆರವಣಿಗೆಯೊಂದಿಗೆ ರಥದೊಳಗೆ ಕೂರಿಸಲಾಯಿತು. ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ರಥಕ್ಕೆ ಪೂಜೆ ಸಲ್ಲಿಸಿದರು.
ಮೇಘಾಲಯ ರಾಜ್ಯದ ರಾಜ್ಯಪಾಲರಾದ ಸಿ.ಎಚ್. ವಿಜಯ ಶಂಕರ್ ಧ್ವಜಾರೋಹಣ ನೆರವೇರಿಸಿ, ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.
ಶ್ರೀಗವಿಸಿದ್ದೇಶ್ವರ ಮಹಾರಾಜ್ ಕೀ ಜೈ ಎನ್ನುವ ಉದ್ಘೋಷದೊಂದಿಗೆ ರಥ ಸಾಗಿತು. ಗವಿಶ್ರೀಗಳ ಮಾರ್ಗದರ್ಶನದಂತೆ ತೇರನ್ನು ಭಕ್ತರು ಎಳೆದು,ಪಾದಗಟ್ಟಿ ತಲುಪಿ, ಮತ್ತೆ ಹಿಂದಿರುಗಿ ಸ್ವಸ್ಥಾನಕ್ಕೆ ರಥ ತಲುಪಿದಾಗ ಚಪ್ಪಾಳೆಯ ಮೂಲಕ ಸಂಭ್ರಮಿಸಿದರು.
ವಿವಿಧ ಜಿಲ್ಲೆಗಳಿಂದ ಬೆಳಗ್ಗೆಯಿಂದಲೇ ಆಗಮಿಸುತ್ತಿದ್ದ ಲಕ್ಷಾಂತರ ಭಕ್ತರು ಸಂಜೆಯಾಗುತ್ತಿದ್ದಂತೆ ಗವಿಮಠದ ಮೈದಾನದಲ್ಲಿ ಸಾಗರದಂತೆ ಜನಸಾಗರ ಹರಿದು ಬಂದರು. ಗವಿಮಠ ಗುಡ್ಡದ ಮೇಲೆ, ವಿವಿಧ ಕಟ್ಟಡಗಳ ಮೇಲೆ ನಿಂತು ರಥೋತ್ಸವವನ್ನು ವೀಕ್ಷಿಸಿದರು. ಬೆಳಗ್ಗೆಯಿಂದಲೇ ಗವಿಸಿದ್ದೇಶ್ವರರ ಗದ್ದುಗೆ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು. ಕನಕಗಿರಿ, ಗಂಗಾವತಿ, ಹೊಸಪೇಟೆ, ಕುಷ್ಟಗಿ, ಸಿಂಧನೂರು, ಗದಗ, ಹಳ್ಳಿಗುಡಿ ವಿವಿಧ ತಾಲೂಕು, ಜಿಲ್ಲೆಗಳಿಂದ ಭಕ್ತರು ಪಾದಯಾತ್ರೆಯ ಮೂಲಕ ಬಂದಿದ್ದರು.
ಸಂಸದ ಕೆ.ರಾಜಶೇಖರ ಹಿಟ್ನಾಳ್, ಮಾಜಿ ಸಂಸದ ಕರಡಿ ಸಂಗಣ್ಣ, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಜನಾರ್ಧನ ರೆಡ್ಡಿ, ಶರಣಬಸವ ಕಂದಕೂರು. ಹೇಮಲತಾ ನಾಯಕ್, ವಿರೋಧ ಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ್, ಮಾಜಿ ಕಾಡ ಅಧ್ಯಕ್ಷ ತಿಪ್ಪೇರುದ್ರ ಸ್ವಾಮಿ, ಬಂಗಾರು ಹನುಮಂತು ಸೇರಿದಂತೆ ವಿವಿಧ ಪಕ್ಷದ ಮುಖಂಡರು ಹಾಗೂ ಅಧಿಕಾರಿಗಳು ಇದ್ದರು.







