Koppal | ಬೂತ್ ಮಟ್ಟದ ಏಜೆಂಟರಗಳಿಗೆ ಎಸ್‌ಐಆರ್-2026ರ ಮಾಹಿತಿ ಕಾರ್ಯಾಗಾರ

ಕೊಪ್ಪಳ : ಎಸ್‌ಐಆರ್ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಹಿನ್ನೆಲೆಯಲ್ಲಿ ಬಿ.ಎಲ್.ಓ.ಗಳು ಮನೆ ಮನೆಗೆ ಭೇಟಿ ನೀಡಲಿದ್ದು, ಈ ವೇಳೆ ಪ್ರತಿಯೊಬ್ಬ ಅರ್ಹ ಮತದಾರರಿಗೆ ಎನುಮರೇಷನ್ ಫಾರಂ ಸಿಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಹೇಳಿದರು.
ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಸೋಮವಾರ (ಜೂ. 15ರಂದು) ಬೂತ್ ಮಟ್ಟದ ಏಜೆಂಟರುಗಳಿಗೆ (ಬಿ.ಎಲ್.ಎ) ವಿಶೇಷ ಸಮಗ್ರ ಪರಿಷ್ಕರಣೆ ಎಸ್.ಐ.ಆರ್-2026ರ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಭಾರತದಲ್ಲಿ ಇದುವರೆಗೂ ಒಟ್ಟು 7 ಬಾರಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಆಗಿದೆ. ಕಳೆದ ಬಾರಿ ಕರ್ನಾಟಕದಲ್ಲಿ 2002 ರಲ್ಲಿ ಎಸ್.ಐ.ಆರ್ ಆಗಿತ್ತು. 2002ರ ಮಾತದಾರರ ಪಟ್ಟಿಯಲ್ಲಿರುವವರನ್ನು ಅರ್ಹ ಮತದಾರರೆಂದು ಪರಿಗಣಿಸಲಾಗುತ್ತಿದೆ. ಪ್ರಸ್ತುತ 2025ರ ಮಾತದಾರರ ಪಟ್ಟಿಯನ್ನು 2002ರ ಪಟ್ಟಿಯೊಂದಿಗೆ ಹೋಲಿಕೆ ಮಾಡಿ ಅವರನ್ನು ಮ್ಯಾಪಿಂಗ್ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಬಿ.ಎಲ್.ಎ ಮತ್ತು ಬಿ.ಎಲ್.ಓ.ಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಪಾರದರ್ಶಕವಾಗಿ ನಡೆಯಬೇಕು. ಈ ದಿಶೆಯಲ್ಲಿ ಮತದಾರರ ಪಟ್ಟಿ ದೋಷರಹಿತವಾಗಿರಬೇಕು. ಹಾಗಾಗಿ ಎರಡು ಕಡೆ ಹೆಸರಿರುವ ಮತದಾರರನ್ನು ಪತ್ತೆ ಹಚ್ಚಿ ಪರಿಷ್ಕರಿಸಲಾಗುತ್ತದೆ. ಮತದಾರರ ಪಟ್ಟಿಯ ಪರಿಷ್ಕರಣೆಯು ಈ ಬಾರಿ ಸಂಪೂರ್ಣವಾಗಿ ಡಿಜಿಟಲೈಜ್ ಆಗಿ ನಡೆಯುತ್ತಿರುವುದರಿಂದ ಒಬ್ಬ ಮತದಾರನಿಗೆ ಎರಡು ಕಡೆ ಹೆಸರು ಉಳಿಸಿಕೊಳ್ಳುವುದಕ್ಕೆ ಯಾವುದೇ ಅವಕಾಶವಿಲ್ಲ. ಎಸ್.ಐ.ಆರ್ ಪ್ರಕ್ರಿಯೆಯಲ್ಲಿ 2025ರ ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬರಿಗೂ ಎನುಮರೇಷನ್ ಫಾರಂ ಕೊಡಲಾಗುತ್ತದೆ. ಮತದಾರರು ಭರ್ತಿ ಮಾಡಿ, ಬಿ.ಎಲ್.ಓ.ಗಳಿಗೆ ನೀಡಿದ್ದಲ್ಲಿ ಅದನ್ನು ಅವರು ಆ್ಯಪ್ ಮೂಲಕ ಮುಂದಿನ ಕ್ರಮ ಕೈಗೊಳ್ಳುವರು ಎಂದರು.
ಬಿ.ಎಲ್.ಓ.ಗಳು ಮನೆ ಮನೆಗೆ ಭೇಟಿ ನೀಡಿ, ಎನುಮರೇಷನ್ ಫಾರಂ ನೀಡುವ ಸಂದರ್ಭದಲ್ಲಿ ಎಲ್ಲಾ ಬೂತ್ ಮಟ್ಟದ ಏಜೆಂಟರುಗಳು ಜಾಗೃತರಾಗಿ ಕಾರ್ಯನಿರ್ವಹಿಸಿ, ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಬಿ.ಎಲ್.ಓ.ಗಳು ನಿಮ್ಮೊಂದಿಗೆ ಸಭೆ ಮಾಡಲಿದ್ದು, ಮತದಾರರಿಂದ ಎನುಮರೇಷನ್ ಫಾರಂ ಸಂಗ್ರಹಿಸಿ, ಅದನ್ನು ಬಿ.ಎಲ್.ಓ.ಗಳಿಗೆ ನೀಡಲು ಎಲ್ಲಾ ಬೂತ್ ಮಟ್ಟದ ಏಜೆಂಟರುಗಳಿಗೆ ಅವಕಾಶ ನೀಡಲಾಗಿದೆ. ಈ ವೇಳೆಯ ಮ್ಯಾಪಿಂಗ್ ಆಗದೇ ಇರುವ ಮತದಾರರ ಮ್ಯಾಪಿಂಗ್ ಮಾಡಿಸಲು ಸಹ ನೀವುಗಳು ಸಹರಿಸಬೇಕು ಎಂದು ಹೇಳಿದರು.
ಜೆಡಿಎಸ್ ಪಕ್ಷದ ಸಿ.ವಿ ಚಂದ್ರಶೇಖರ ಹಾಗೂ ಬಿಜೆಪಿಯ ವಿರೇಶ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್ ವಿದ್ಯಾಧರ ಅವರು ಎಸ್.ಐ.ಆರ್ ಕುರಿತು ವಿವರವಾಗಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಕಾಂಗ್ರೆಸ್ ಪಕ್ಷದ ಕೃಷ್ಣರೆಡ್ಡಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಬಿ.ಎಲ್.ಎ-1 ಮತ್ತು 2 ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಎಸ್.ಐ.ಆರ್ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಿಂದ ಈಗಾಗಲೇ ಬಿ.ಎಲ್.ಎ-1 ಮತ್ತು 2ನ್ನು ನೇಮಿಸಿಕೊಂಡಿದ್ದಾರೆ. ಬಿ.ಎಲ್.ಓ.ಗಳ ವಿವರಗಳುಳ್ಳ ಪಟ್ಟಿಯನ್ನು ಬೂತ್ ಮಟ್ಟದ ಏಜೆಂಟರುಗಳಿಗೆ ನೀಡಬೇಕು. ಇದರಿಂದ ಬಾಕಿ ಇರುವ ಮತದಾರರ ಮ್ಯಾಪಿಂಗ್ ಮಾಡಿಸಲು ಬಿ.ಎಲ್.ಎ.ಗಳಿಗೆ ಅನುಕೂಲವಾಗುತ್ತದೆ. ಈ ಕಾರ್ಯಕ್ರಮವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು.
- ಕೆ.ರಾಘವೇಂದ್ರ ಹಿಟ್ನಾಳ, ಕೊಪ್ಪಳ ಶಾಸಕ
ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಪ್ರಯುಕ್ತ ನಮ್ಮ ಜಿಲ್ಲೆಯಲ್ಲಿ ಈಗಾಗಲೇ ಶೇ.92 ಕ್ಕಿಂತು ಹೆಚ್ಚಿನ ಪ್ರಮಾಣದಲ್ಲಿ ಮ್ಯಾಪಿಂಗ್ ಮಾಡಿದ್ದು, ರಾಜ್ಯದಲ್ಲಿ ನಮ್ಮ ಜಿಲ್ಲೆ ಮುಂಚೂಣಿಯಲ್ಲಿದೆ. ಎನುಮರೇಷನ್ ಫಾರಂ ಭರ್ತಿ ಮಾಡಿ ಸಲ್ಲಿಸುವುದು ತುಂಬಾ ಅವಶ್ಯಕವಾಗಿದ್ದು, ಈ ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಬಿಟ್ಟು ಹೋಗದಂತೆ ಎಲ್ಲಾ ಬಿ.ಎಲ್.ಎ.ಗಳು ನೋಡಿಕೊಳ್ಳಬೇಕು.
-ಕೆ.ರಾಜಶೇಖರ ಬಸವರಾಜ ಹಿಟ್ನಾಳ, ಸಂಸದರು ಕೊಪ್ಪಳ.






