ಕೊಪ್ಪಳ |ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ “ಮಾದರಿ ನೆರೆಹೊರೆ-ಮಾದರಿ ಸಮಾಜ” ಅಭಿಯಾನ

ಕೊಪ್ಪಳ : ಜಮಾಅತೆ ಇಸ್ಲಾಮಿ ಹಿಂದ್ “ಮಾದರಿ ನೆರೆಹೊರೆ ಮಾದರಿಯ ಸಮಾಜ” ಎಂಬ ಹೆಸರಿನ 10 ದಿನಗಳ ‘ನೆರೆಹೊರೆಯ ಹಕ್ಕುಗಳು” ರಾಷ್ಟ್ರವ್ಯಾಪಿ ಅಭಿಯಾನಕ್ಕೆ ಇಂದು ಚಾಲನೆ ನೀಡಿದೆ. ಅಭಿಯಾನವು ನವೆಂಬರ್ 20 ರಿಂದ 30ರವರೆಗೆ ನಡೆಯಲಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಸಂಚಾಲಕ ದಿಲಾವರ್ ಖಾನ್ ಹೇಳಿದರು.
ಕೊಪ್ಪಳದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದಿಲಾವರ್ ಖಾನ್, ಅತಿಯಾದ ಖಾಸಗಿತನದ ಮೇಲೆ ಕೇಂದ್ರೀಕೃತವಾಗಿರುವ ಇಂದಿನ ನಗರ ಜೀವನವು ನೆರೆಯವರ ನಡುವಿನ ಒಡನಾಟ ಹಾಗೂ ಪರಸ್ಪರ ಕಾಳಜಿಯನ್ನು ನಿಧಾನವಾಗಿ ಕುಗ್ಗಿಸುತ್ತಿದೆ ಎಂದು ಹೇಳಿದರು. “ನೆರೆಯವರ ಬಗ್ಗೆ ನಿರ್ಲಕ್ಷ್ಯ ಹೆಚ್ಚುತ್ತಿದ್ದು, ಅವರ ಹಕ್ಕುಗಳನ್ನು ಕಡೆಗಣಿಸುವ ಪ್ರವೃತ್ತಿ ಗಂಭೀರವಾಗಿದೆ. ಸಮಾಜವನ್ನು ಈ ವಿಷಯದತ್ತ ಎಚ್ಚರಗೊಳಿಸುವ ತುರ್ತು ಅಗತ್ಯವಿದೆ” ಎಂದು ಹೇಳಿದರು.
ಈ ಅಭಿಯಾನವು ಯಾವುದೇ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲದೆ, ಕರುಣೆ ಮತ್ತು ಜವಾಬ್ದಾರಿಯುತ ಸಮಾಜ ನಿರ್ಮಾಣಕ್ಕೆ ಆಸಕ್ತಿ ಇರುವ ಪ್ರತಿಯೊಬ್ಬ ನಾಗರಿಕನಿಗೂ ಮುಕ್ತ ಆಹ್ವಾನವಾಗಿದೆ ಎಂದು ಹೇಳಿದರು. ನೆರೆಯವರ ಹಕ್ಕುಗಳ ಕುರಿತು ಉಪದೇಶಗಳನ್ನು ನೀಡುವುದು, ಪರಸ್ಪರ ಕಾಳಜಿ, ಸಹಕಾರ, ಶಿಸ್ತು, ಸ್ವಚ್ಛತೆ ಮತ್ತು ನಾಗರಿಕ ಜವಾಬ್ದಾರಿಯನ್ನು ಉತ್ತೇಜಿಸುವುದು, ನೆರೆಯವರ ನಡುವಿನ ಅಂತರಗಳನ್ನು ಕಡಿಮೆ ಮಾಡಿ ಸಹೋದರತ್ವ ಮತ್ತು ಸೌಹಾರ್ದತೆಯನ್ನು ಬೆಳೆಸುವುದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಘಟಕದ ಆಧ್ಯಕ್ಷ ಸೈಯದ್ ಹಿದಾಯತ್ ಅಲಿ, ಅಸ್ಗರ್ ಖಾನ್, ಅಯಾಝ್ ಅಹ್ಮದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.







