Koppal | ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆ ಪಾರದರ್ಶಕತೆಗೆ ಆಗ್ರಹಿಸಿ ಜೆಎಎಸ್‌ಸಿ–ಎಐಡಿವೈಒ ಪ್ರತಿಭಟನೆ

ಕೊಪ್ಪಳ: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕ ಹಾಗೂ ಭ್ರಷ್ಟಾಚಾರಮುಕ್ತವಾಗಿ ನಡೆಸಬೇಕು. ಕೆಪಿಎಸ್‌ಸಿಯಲ್ಲಿನ ಅಕ್ರಮಗಳ ಕುರಿತು ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ (ಜೆಎಎಸ್‌ಸಿ) ಹಾಗೂ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಗುರುವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ ಜಿಲ್ಲಾ ಮುಖಂಡ ಶರಣು ಪಾಟೀಲ್, ಕೆಪಿಎಸ್‌ಸಿಯಲ್ಲಿ ಪದೇ ಪದೇ ಬೆಳಕಿಗೆ ಬರುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ಅಕ್ರಮಗಳು, ವಿಳಂಬ ಹಾಗೂ ಭ್ರಷ್ಟಾಚಾರದ ಆರೋಪಗಳಿಂದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಭವಿಷ್ಯ ಸಂಕಷ್ಟಕ್ಕೀಡಾಗಿದೆ. ಪಾರದರ್ಶಕ ಹಾಗೂ ನ್ಯಾಯಸಮ್ಮತ ನೇಮಕಾತಿ ವ್ಯವಸ್ಥೆಯನ್ನು ರೂಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
1998–99ರ ನೇಮಕಾತಿ ವಿವಾದಗಳಿಂದ ಆರಂಭವಾಗಿ, 2011ರ ಪರೀಕ್ಷಾ ಅಕ್ರಮಗಳು, 2014ರ ಎಫ್‌ಡಿಎ ಪ್ರಶ್ನೆಪತ್ರಿಕೆ ಸೋರಿಕೆ, 2019ರ ಅಂಕಗಳ ತಿರುಚುವಿಕೆ ಆರೋಪ, ಪಿಡಿಒ ಹಾಗೂ ಕೆಎಎಸ್ ನೇಮಕಾತಿಯಲ್ಲಿನ ಅಕ್ರಮಗಳು, ಕೆಪಿಎಸ್‌ಸಿ ಅಧ್ಯಕ್ಷರ ಸ್ವಜನಪಕ್ಷಪಾತ ಸೇರಿದಂತೆ ವಿವಿಧ ಆರೋಪಗಳು ಯುವಜನರ ವಿಶ್ವಾಸವನ್ನು ಕುಗ್ಗಿಸಿವೆ. ಅರ್ಹತೆಗಿಂತ ಹಣ ಮತ್ತು ಪ್ರಭಾವಕ್ಕೆ ಆದ್ಯತೆ ಸಿಗುತ್ತಿದೆ ಎಂಬ ಭಾವನೆ ಬೇರೂರಿದ್ದು, ಈ ಪರಿಸ್ಥಿತಿಗೆ ಸರ್ಕಾರ ತೆರೆ ಎಳೆಯಬೇಕು ಎಂದು ಒತ್ತಾಯಿಸಿದರು.
ಕೆಪಿಎಸ್‌ಸಿಯಲ್ಲಿನ ಎಲ್ಲಾ ಭ್ರಷ್ಟಾಚಾರದ ಆರೋಪಗಳ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಪಿ.ಸಿ. ಹೋಟಾ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತಂದು ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕ, ಸಮಯಬದ್ಧ ಹಾಗೂ ತಂತ್ರಜ್ಞಾನ ಆಧಾರಿತವಾಗಿ ರೂಪಿಸಬೇಕು. ಕೆಪಿಎಸ್‌ಸಿ ಅಧ್ಯಕ್ಷರು ಹಾಗೂ ಸದಸ್ಯರ ಆಯ್ಕೆಯಲ್ಲಿ ವಿಷಯ ತಜ್ಞರಿಗೆ ಆದ್ಯತೆ ನೀಡಬೇಕು. ಎಲ್ಲಾ ಹಂತದ ಸಿಬ್ಬಂದಿಯನ್ನು ನಿಯಮಿತವಾಗಿ ವರ್ಗಾವಣೆ ಮಾಡಬೇಕು. ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಿ ಉದ್ಯೋಗಾಕಾಂಕ್ಷಿಗಳ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಆಗ್ರಹಿಸಿದರು.
ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ಹಾಗೂ ಕಂದಾಯ ಇಲಾಖೆಯ ಭೂಮಾಪಕರ ನೇಮಕಾತಿಯನ್ನು ಕೆಪಿಎಸ್‌ಸಿಯಿಂದ ಕೆಇಎಗೆ ವರ್ಗಾಯಿಸಿರುವ ಹಿನ್ನೆಲೆಯಲ್ಲಿ, ಈ ಹುದ್ದೆಗಳಿಗಾಗಿ ಕೆಪಿಎಸ್‌ಸಿ ಅಭ್ಯರ್ಥಿಗಳಿಂದ ಸಂಗ್ರಹಿಸಿರುವ ಅರ್ಜಿ ಶುಲ್ಕವನ್ನು ಮರುಪಾವತಿಸಬೇಕು ಎಂದೂ ಒತ್ತಾಯಿಸಿದರು.
ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾಧಿಕಾರಿಗಳ ಪರವಾಗಿ ಚುನಾವಣಾ ತಹಶೀಲ್ದಾರ್ ರವಿಕುಮಾರ್ ವಸ್ತ್ರದ್ ಮನವಿ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಸದಸ್ಯರಾದ ಸುಭಾನ್ ನೀರಲಗಿ, ಶಿವಮೂರ್ತಿ ವಡಗನಾಳ, ಹೊನ್ನೂರು ಹನಕುಂಟಿ, ಸ್ಪರ್ಧಾರ್ಥಿಗಳಾದ ಫಯಾಝ್ ಮೆಹಬೂಬ್ ನಗರ, ಶ್ರೀಧರ್ ಮಾಲಿಪಾಟೀಲ್, ಬಸವರಾಜ್, ಕಿರಣ್, ಅಶೋಕ್ ಬಿ. ಹೊಸಳ್ಳಿ, ಮಾರುತಿ, ಹೊನ್ನೂರಸಾಬ್ ಸೇರಿದಂತೆ ಉದ್ಯೋಗಾಕಾಂಕ್ಷಿಗಳು ಹಾಗೂ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು.






