ಕೊಪ್ಪಳ| ಗೃಹಲಕ್ಷ್ಮಿ ಯೋಜನೆಯ ಹಣದಿಂದ ಮೂವರು ಹೆಣ್ಣುಮಕ್ಕಳಿಗೆ ಜೀವವಿಮೆ ಮಾಡಿಸಿದ ಮಹಿಳೆಗೆ ಸನ್ಮಾನ

ಕುಕನೂರು : ಸರಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಮಹಿಳೆಯೊಬ್ಬರು ತನ್ನ ಮೂವರು ಹೆಣ್ಣುಮಕ್ಕಳ ಜೀವವಿಮೆ ಮಾಡಿಸಿ ಸರಕಾರದ ಯೋಜನೆಯನ್ನು ಸದುಪಯೋಗಪಡಿಸಿಕೊಂಡಿದ್ದಾರೆ.
ಕುಕನೂರು ತಾಲೂಕಿನ ಮಂಗಳೂರು ಗ್ರಾಮದ ಜ್ಯೋತಿ ಕನಕಪ್ಪ ಕಲ್ಲೂರು ಎಂಬ ಗೃಹಿಣಿ, ರಾಜ್ಯ ಸರಕಾರದ ಗೃಹಲಕ್ಷ್ಮಿ ಯೋಜನೆಯಿಂದ ಬರುವ ತಿಂಗಳ 2000 ರೂ. ಹಣವನ್ನು ತನ್ನ ಮೂವರು ಹೆಣ್ಣು ಮಕ್ಕಳ ಹೆಸರಿನ ಮೇಲೆ ಎಲ್‌ಐಸಿ ಪಾಲಿಸಿ ಮಾಡಿಸಿ ಗಮನ ಸೆಳೆದಿದ್ದಾರೆ.
ಸರಕಾರಿ ಯೋಜನೆಯನ್ನು ಸದುಪಯೋಗಪಡಿಸಿಕೊಂಡ ಜ್ಯೋತಿ ಅವರನ್ನು ತಾಲೂಕು ಪಂಚಾಯತಿ ಇಒ ಸಂತೋಷ್ ಬಿರಾದರ್ ಸನ್ಮಾನಿಸಿ ಗೌರವಿಸಿದ್ದಾರೆ.
ಗೃಹಲಕ್ಷ್ಮಿ, ಶಕ್ತಿ ಯೋಜನೆ, ಯುವನಿಧಿ, ಅನ್ನಭಾಗ್ಯ ಹಾಗೂ ಗೃಹ ಜ್ಯೋತಿ ಯೋಜನೆಯಿಂದ ಬಡ ಹಾಗೂ ಮಧ್ಯಮ ವರ್ಗದವರಿಗೆ ಸಾಕಷ್ಟು ಬದಲಾವಣೆ ಹಾಗೂ ಅನುಕೂಲತೆ ಉಂಟಾಗಿವೆ.
ಈ ಕುರಿತು ಪ್ರತಿಕ್ರಿಯಿಸಿದ ತಾಲೂಕು ಪಂಚಾಯತಿ ಇಒ ಸಂತೋಷ್ ಬಿರಾದರ್, ಮಂಗಳೂರಿನ ಗೃಹಣಿಯೊಬ್ಬರು ಗ್ರಹಲಕ್ಷ್ಮಿ ಯೋಜನೆಯಿಂದ ಬರುವ 2000ರೂ. ಹಣವನ್ನು ತನ್ನ ಮೂವರು ಹೆಣ್ಣು ಮಕ್ಕಳ ಹೆಸರಿಗೆ ಎಲ್‌ಐಸಿ ಪಾಲಿಸಿ ಮಾಡಿಸಿರುವುದು ಅತ್ಯಂತ ಶ್ಲಾಘನೀಯ ಮತ್ತು ಸ್ಪೂರ್ತಿದಾಯಕ ಕಾರ್ಯವಾಗಿದೆ ಎಂದು ಹೇಳಿದ್ದಾರೆ.







