Koppal | ಜಿಲ್ಲಾ ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನೆ : ಸಿಇಸಿ ಜ್ಞಾನೇಶ್‌ಕುಮಾರ್ ರಾಜೀನಾಮೆಗೆ ಆಗ್ರಹ

ಕೊಪ್ಪಳ: ಕೇಂದ್ರ ಚುನಾವಣಾ ಆಯೋಗದ ಮತಗಳ್ಳತನ ನೀತಿಯನ್ನು ಖಂಡಿಸಿ ಹಾಗೂ ದೆಹಲಿಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವುದನ್ನು ವಿರೋಧಿಸಿ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮತಗಳ್ಳತನ ಸಾಕ್ಷ್ಯ ಸಮೇತ ಸಾಬೀತಾಗಿದೆ ಎಂದು ಆರೋಪಿಸಿದ ಮಲ್ಲಿಕಾರ್ಜುನ ನಾಗಪ್ಪ, ಈ ಕುರಿತು ಗ್ರಾಮ ಮಟ್ಟದಲ್ಲಿಯೂ ನಿರಂತರ ಹೋರಾಟ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಕರೆ ನೀಡಿದರು.
ಮಾಜಿ ಸಂಸದ ಕರಡಿ ಸಂಗಣ್ಣ ಮಾತನಾಡಿ, ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ಮತಗಳ್ಳತನ ಸಂವಿಧಾನ ವಿರೋಧಿ ಚಟುವಟಿಕೆಯಾಗಿದೆ ಎಂದು ಆರೋಪಿಸಿದರು. ಮುಂದಿನ ದಿನಗಳಲ್ಲಿ ದೇಶದಲ್ಲಿ ಮತಪತ್ರಗಳ (ಬ್ಯಾಲೆಟ್ ಪೇಪರ್) ಮೂಲಕವೇ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.
ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಮಾತನಾಡಿ, ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಸುವ ಮೂಲಕ ಬಿಜೆಪಿ ಸರ್ಕಾರದ ದುರಾಡಳಿತವನ್ನು ದೇಶದ ಮೂಲೆಮೂಲೆಗೂ ತಲುಪಿಸಿದ್ದಾರೆ. ದೇಶದಲ್ಲಿ ಸಂವಿಧಾನಬದ್ಧವಾಗಿ ಚುನಾವಣೆ ನಡೆದಿದ್ದರೆ ರಾಹುಲ್ ಗಾಂಧಿಯವರು ಪ್ರಧಾನಮಂತ್ರಿಯಾಗುತ್ತಿದ್ದರು ಎಂದು ಹೇಳಿದರು.
ಮತಗಳ್ಳತನದ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಆರೋಪಿಸಿದ ಅವರು, ಇದೀಗ ಪುನಃ ಅದೇ ಅಕ್ರಮ ನಡೆಸಿ ಸಾಕ್ಷ್ಯ ಸಮೇತ ಸಿಕ್ಕಿಬಿದ್ದಿದೆ ಎಂದು ಹರಿಹಾಯ್ದರು.
ಕೆಪಿಸಿಸಿ ವಕ್ತಾರೆ ಶೈಲಜಾ ಹಿರೇಮಠ ಮಾತನಾಡಿ, 2023ರ ಸಂಸತ್ ಅಧಿವೇಶನದಲ್ಲಿ 191 ಸಂಸದರನ್ನು ಅಮಾನತುಗೊಳಿಸಿ, ಚುನಾವಣಾ ಆಯೋಗದ ಮುಖ್ಯಸ್ಥರಾದ ಜ್ಞಾನೇಶ್‌ಕುಮಾರ್ ಅವರಿಗೆ ಪ್ರಧಾನಿ, ರಾಷ್ಟ್ರಪತಿ ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗಿಂತಲೂ ಹೆಚ್ಚಿನ ಅಧಿಕಾರ ನೀಡಲಾಗಿದೆ ಎಂದು ಆರೋಪಿಸಿದರು.
ಎಸ್‌ಐಆರ್ ಜಾರಿಗೊಳಿಸಿ ಮತಗಳ್ಳತನ ಮಾಡುವ ಮೂಲಕ ವಿವಿಧ ರಾಜ್ಯಗಳ ಚುನಾವಣೆ ಗೆದ್ದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲಾಗಿದೆ ಎಂದು ದೂರಿದರು. ನಮೂನೆ ಸಂಖ್ಯೆ 6ರಲ್ಲಿ ಅಕ್ರಮವಾಗಿ ಅಂಶಗಳನ್ನು ಸೇರಿಸಿ ಸರ್ವಾಧಿಕಾರ ನಡೆಸಿರುವುದು ಹಾಗೂ ನಮೂನೆ ಸಂಖ್ಯೆ 7ನ್ನು ಅಕ್ರಮವಾಗಿ ಮುದ್ರಿಸಿ ಮತಗಳ್ಳತನಕ್ಕೆ ಯತ್ನಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು. ಜ್ಞಾನೇಶ್‌ಕುಮಾರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದರು.
ಪ್ರತಿಭಟನಾ ಸಭೆಯಲ್ಲಿ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೃಷ್ಣ ಎಂ. ಇಟ್ಟಂಗಿ, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಚಾಲಕ ಸುರೇಶ ದಾಸರೆಡ್ಡಿ, ಅಕ್ಬರ್ ಪಾಷಾ, ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಗಾಳೆಪ್ಪ ಪೂಜಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಷಾ ಕಾಟನ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಪದ್ಮಾವತಿ ಕಂಬಳಿ, ಸುಮಂಗಲಾ ನಾಯಕ, ಸೌಭಾಗ್ಯ ಗೊರವರ, ಆರ್‌ಜಿಪಿಆರ್ ಮಾನ್ವಿ ಪಾಷಾ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗೂಳಪ್ಪ ಹಲಗೇರಿ, ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಹೊನ್ನೂರಸಾಬ್ ಭೈರಾಪುರ, ಆನಂದ ಕಿನ್ನಾಳ್, ಮಲ್ಲು ಪೂಜಾರ, ಹಿಂದುಳಿದ ವರ್ಗಗಳ ಉಪಾಧ್ಯಕ್ಷ ದುರುಗೇಶ್ ಕುಷ್ಟಗಿ, ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ಬಣ್ಣೆಪ್ಪಗೌಡ, ಶರಣಪ್ಪ ಸಜ್ಜನ ಸೇರಿದಂತೆ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.






