ಕೊಪ್ಪಳ| ವೆನಿಝುವೆಲಾ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ

ಕನಕಗಿರಿ: ವೆನಿಝುವೆಲಾ ಮೇಲೆ ಅಮೇರಿಕಾ ನಡೆಸಿದ ಮಿಲಿಟರಿ ದಾಳಿಯನ್ನು ಖಂಡಿಸಿ ಮಂಗಳವಾರ ವಾಲ್ಮೀಕಿ ವೃತ್ತದಲ್ಲಿ ಸಿಪಿಎಂ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು.
ವೆನೆಝುವೆಲಾ ದೇಶದ ಮೇಲೆ ಅಮೆರಿಕವು , ಏಕಪಕ್ಷೀಯ ಮಿಲಿಟರಿ ಆಕ್ರಮಣ ನಡೆಸಿ ಅಧ್ಯಕ್ಷ ನಿಕೊಲಸ್ ಮಡುರೊ, ಪತ್ನಿ ಸಿಲಿಯಾ ರವರನ್ನು ಅಪಹರಣ ಮಾಡಿರುವುದನ್ನು ಖಂಡಿಸಿ ಸಿಪಿಐಎಂ ಕಾರ್ಯಕರ್ತರು ಕನಕಗಿರಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಎಂ ಕಾರ್ಯದರ್ಶಿ ಬಾಳಪ್ಪ ಹುಲಿಹೈದರ ಮಾತಾನಾಡಿ ವೆನೆಝುವೆಲಾದ ತೈಲ ಸಂಪತ್ತನ್ನು ಕೊಳ್ಳೆ ಹೊಡೆಯುವ ದುರುದ್ದೇಶಕ್ಕೆ ಅಡ್ಡಿಯಾಗಿದ್ದ ಕಾರಣಕ್ಕಾಗಿ ಮಡುರೋ ರವರನ್ನು ಪದಚ್ಯುತಗೊಳಿಸುವ ಮಿಲಿಟರಿ ಕಾರ್ಯಾಚರಣೆಯನ್ನು ಅಮೆರಿಕಾ ನಡೆಸಿದೆ ಎಂದರು.
"ಒಂದು ಸಾರ್ವಭೌಮ, ಸ್ವತಂತ್ರ ಹಾಗೂ ಚುನಾಯಿತ ಪ್ರಜಾಪ್ರಭುತ್ವ ರಾಷ್ಟ್ರವೊಂದರ ಅಧ್ಯಕ್ಷರನ್ನು ಮತ್ತೊಂದು ದೇಶ ಮಿಲಿಟರಿ ಆಕ್ರಮಣದ ಮೂಲಕ ಅಪಹರಿಸಿರುವುದು ಹಿಂದೆಂದೂ ಕಂಡರಿಯದ ದೌರ್ಜನ್ಯವಾಗಿದೆ. ವೆನೆಝುವೆಲಾದ ಮೇಲೆ ನಡೆದಿರುವ ಧಾಳಿ, ಭಾರತ ಸೇರಿದಂತೆ ಇಡೀ ಪ್ರಪಂಚದ ಎಲ್ಲಾ ಸಾರ್ವಭೌಮ ದೇಶಗಳ ಮೇಲೆ ನಡೆದಿರುವ ಆಕ್ರಮಣವಾಗಿದೆ. ಕೂಡಲೇ ವೆನೆಝುವೆಲಾ ಅಧ್ಯಕ್ಷರನ್ನು ಬಿಡುಗಡೆ ಮಾಡುವಂತೆ ಭಾರತ ಸರ್ಕಾರ ಅಮೇರಿಕಾವನ್ನು ಒತ್ತಾಯಿಸಬೇಕು. ವಿಶ್ವಸಂಸ್ಥೆ ಭದ್ರತಾ ಮಂಡಳಿ ಕೂಡಲೇ ಅಮೇರಿಕಾದ ಪುಂಡಾಟಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದರು.
ಪರಶುರಾಮ, ಮಲ್ಲಪ್ಪ ಮ್ಯಾಗಡೆ, ನಿಂಗಪ್ಪ ಶಿವು ಮೌಲಾಹುಸೇನ, ಪಾಮಣ್ಣ ಕಜ್ಜಿ, ಹುಸೇನ್ ಸಾಬ್ ತಾವರಗೇರಾ, ಹುಸೇನಪ್ಪ ಕಜ್ಜಿ, ಅಲ್ಲಾ ಸಾಬ್ ಕೋರಿ ಹೊನ್ನಪ್ಪ ಮಡಿವಾಳ, ರಾಮಣ್ಣ ಚಲುವಾದಿ ವೀರೇಶ ಹೊನ್ನೂರು ಸಾಬ್ ಸಣ್ಣ ನಿಂಗಪ್ಪ ಮ್ಯಾಗೆಡೆ ವೆಂಕಟೇಶ್ ಭಾವಿಕಟ್ಟಿ, ಹನುಮಂತ ಸೇರಿದಂತೆ ಇತರರು ಇದ್ದರು.







