ಕೊಪ್ಪಳ | ಆಯುರ್ವೇದ ಆಸ್ಪತ್ರೆಗಳು, ಚಿಕಿತ್ಸಾಲಯಗಳಿಗೆ ಔಷಧ ಪೂರೈಸುವಂತೆ ಸರಕಾರಕ್ಕೆ ಮನವಿ

ಕೊಪ್ಪಳ : ಜಿಲ್ಲೆಯ ಆಯುರ್ವೇದ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳಿಗೆ ಔಷಧ ಪೂರೈಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಡಾ.ಸುರೇಶ್.ಬಿ. ಇಟ್ನಾಳ ಇವರ ಅನುಪಸ್ಥಿತಿಯಲ್ಲಿ ಅವರ ಆಪ್ತ ಸಹಾಯಕಿ ಶ್ರೀಮತಿ ಜಯಲಕ್ಷ್ಮೀ ನವಲಿ ಅವರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಶುಕ್ರವಾರ ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ.ಗಫಾರ್, ಎಸ್.ಯು.ಸಿ.ಐ.ಮುಖಂಡ ಶರಣು ಗಡ್ಡಿ, ಗಿಣಿಗೇರಿ ನಾಗರಿಕ ಹೋರಾಟ ಸಮಿತಿಯ ಸಂಚಾಲಕ ಮಂಗಳೇಶ್ ರಾಠೋಡ್ ಸೇರಿದಂತೆ ಹಲವರು ಮನವಿ ಸಲ್ಲಿಸಿದರು.
ಕೊಪ್ಪಳ ಜಿಲ್ಲೆಯ ಕುಕನೂರು ಕನಕಗಿರಿ, ಕಾರಟಗಿಯಲ್ಲಿ ಪ್ರತ್ಯೇಕವಾಗಿ ಮೂರು ಪಟ್ಟಣಗಳಲ್ಲಿ ನೂತನ ತಾಲೂಕು ಸರಕಾರಿ ಆಯುರ್ವೇದ ಆಸ್ಪತ್ರೆಗಳನ್ನು ತಕ್ಷಣ ಪ್ರಾರಂಭಿಸಬೇಕು. ಆಯುಷ್ ಇಲಾಖೆಯಿಂದ ಜಿಲ್ಲೆಯಲ್ಲಿ ಆಯುರ್ವೇದ ಔಷಧ ಕುರಿತು ಇನ್ನಷ್ಟು ಪ್ರಚಾರ ಮಾಡುವ ಅಗತ್ಯ ಇದೆ. ಕೊಪ್ಪಳ ಜಿಲ್ಲೆಯ ಆಯುಷ್ ಇಲಾಖೆಯ ನಾಲ್ಕು ಆಯುರ್ವೇದ ಆಸ್ಪತ್ರೆಗಳು ಮತ್ತು ಹದಿನೈದು ಚಿಕಿತ್ಸಾಲಯಗಳಿಗೆ ಔಷಧಿಗಳಿಗೆ ವಾರ್ಷಿಕ 24 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತಿದ್ದು, ಜನಸಂಖ್ಯೆ ಹೆಚ್ಚಳದಿಂದ ಬೇಡಿಕೆ ಹೆಚ್ಚಾಗಿದೆ. ಇನ್ಮುಂದೆ ಆಯುರ್ವೇದ ಔಷಧಕ್ಕಾಗಿ ಅನುದಾನ ವಾರ್ಷಿಕ 1.5 ಕೋಟಿ ರೂಪಾಯಿಗಳಿಗೆ ಹೆಚ್ಚಿಸಬೇಕು ಎಂದು ಆಗ್ರಹಿಸಲಾಗಿದೆ.







