Koppal | ಆ.26ರಿಂದ ʼಕ್ರಾಂತಿಯ ಜ್ಯೋತಿ-ಪ್ರವಾದಿ ಮುಹಮ್ಮದ್(ಸ)’ ಕುರಿತು ರಾಜ್ಯವ್ಯಾಪಿ ಸೀರತ್ ಅಭಿಯಾನ

ಕೊಪ್ಪಳ: ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮದಿನಾಚರಣೆಯ ಅಂಗವಾಗಿ ಜಮಾಅತೆ ಇಸ್ಲಾಮಿ ಹಿಂದ್ ಕೊಪ್ಪಳ ಶಾಖೆಯ ವತಿಯಿಂದ ಆ.26ರಿಂದ ಸೆ.6ರವರೆಗೆ ‘ಕ್ರಾಂತಿಯ ಜ್ಯೋತಿ–ಪ್ರವಾದಿ ಮುಹಮ್ಮದ್ (ಸ)’ ಶೀರ್ಷಿಕೆಯಡಿ ಸೀರತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಸಂಚಾಲಕ ಮೊಹಮ್ಮದ್ ದಿಲಾವರ್ ಅಂಬರ್ ಖಾನ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿಯಾನದ ಅಂಗವಾಗಿ ವಿವಿಧ ಸಾಮಾಜಿಕ, ಸಾಹಿತ್ಯಿಕ ಹಾಗೂ ಸೌಹಾರ್ದ ಚಟುವಟಿಕೆಗಳನ್ನು ಆಯೋಜಿಸಲಾಗಿದೆ ಎಂದರು.
ಅಭಿಯಾನದ ಭಾಗವಾಗಿ ‘ಮಾನವ ಮನಸ್ಸಿನ ಕೃಷಿಕ–ಮನದೊಡೆಯ ಪ್ರವಾದಿ ಮುಹಮ್ಮದ್ (ಸ)’ ಹಾಗೂ ‘ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪ್ರವಾದಿ ಮುಹಮ್ಮದ್ (ಸ)’ ಕೃತಿಗಳನ್ನು ಸಾಹಿತಿಗಳು, ವೈದ್ಯರು, ಪ್ರಾಧ್ಯಾಪಕರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರಿಗೆ ತಲುಪಿಸಲಾಗುವುದು. ಕೊಳೂರು, ಚಿಕ್ಕಸಿಂದೋಗಿ, ಹನಕುಂಟಿ, ಮಂಗಳೂರು ಹಾಗೂ ಚಿಕ್ಕಬಗನಾಳ ಗ್ರಾಮಗಳಲ್ಲೂ ಅಭಿಯಾನದ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಸೆ.5ರಂದು ರಾತ್ರಿ 7.15ಕ್ಕೆ ನಗರದ ಸಾಹಿತ್ಯ ಭವನದಲ್ಲಿ ವಿಶೇಷ ವಿಚಾರಗೋಷ್ಠಿ ಹಾಗೂ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ. ಆ.30ರಂದು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿ ಹಣ್ಣು-ಹಂಪಲು ವಿತರಿಸಲಾಗುವುದು. ವೃದ್ಧಾಶ್ರಮ ಭೇಟಿ, ಸ್ವಚ್ಛತೆ ಕುರಿತು ಸಾರ್ವಜನಿಕ ಜಾಗೃತಿ ಹಾಗೂ ಸೀರತ್ ಪ್ರದರ್ಶನವನ್ನೂ ಆಯೋಜಿಸಲಾಗಿದೆ ಎಂದರು.
ಅಭಿಯಾನದ ಅಂಗವಾಗಿ ‘ಸನ್ಮಾರ್ಗ’ ವಾರಪತ್ರಿಕೆ ಹಾಗೂ ‘ಅನುಪಮಾ’ ಮಾಸಪತ್ರಿಕೆಯ ವಿಶೇಷಾಂಕಗಳನ್ನು ಬಿಡುಗಡೆ ಮಾಡಲಾಗುವುದು. ಸಮುದಾಯದ ಪ್ರಮುಖರು ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸ್ವಾಗತ ಮತ್ತು ಸಲಹಾ ಸಮಿತಿಗಳನ್ನು ರಚಿಸಲಾಗಿದೆ. ಸಾರ್ವಜನಿಕರು ಹಾಗೂ ಮಾಧ್ಯಮದವರು ಅಭಿಯಾನಕ್ಕೆ ಸಹಕಾರ ನೀಡಬೇಕು ಎಂದು ಮೊಹಮ್ಮದ್ ದಿಲಾವರ್ ಅಂಬರ್ ಖಾನ್ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅವರೊಂದಿಗೆ ಜಮಾತೆ ಇಸ್ಲಾಮಿ ಹಿಂದ್ ಕೊಪ್ಪಳ ಘಟಕದ ಅಧ್ಯಕ್ಷರಾದ ಸೈಯದ್ ಹಿದಾಯತ್ ಅಲಿ, ಮಹಿಳಾ ವಿಭಾಗದ ಸಂಚಾಲಕಿ ಉಮ್ಮೆ ಸಲ್ಮಾ, ಸದಸ್ಯರಾದ ಮೊಹಮ್ಮದಿಯ ಅಸರಾ, ರಿಜ್ವಾನಾ ಬೇಗಮ್, ಮೊಹಮ್ಮದ್ ಅಶ್ಫಾಕ್ ಹುಸೇನ್, ಅಜಗರ್ ಖಾನ್, ಅಯಾಜ್ ಅಹಮದ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.






