Koppal | ವಿವಿಧ ಹೋಟೆಲ್‌ಗಳ ಮೇಲೆ ದಿಢೀರ್ ದಾಳಿ: ಅವಧಿ ಮೀರಿದ ಆಹಾರ ಪದಾರ್ಥಗಳ ವಶ

ಕೊಪ್ಪಳ: ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ಆ.27ರಂದು ಕೊಪ್ಪಳ ನಗರದ ಪ್ರಮುಖ ಹೋಟೆಲ್‌ಗಳ ಮೇಲೆ ದಿಢೀರ್ ದಾಳಿ ನಡೆಸಿ, ಗುಣಮಟ್ಟವಿಲ್ಲದ, ಬಣ್ಣಯುಕ್ತ ಹಾಗೂ ಅವಧಿ ಮೀರಿದ ಅಪಾರ ಪ್ರಮಾಣದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡರು.
ನಗರದ ಮಾಲತೇಶ ಹೋಟೆಲ್, ಅಕ್ಷಯ ಹೋಟೆಲ್, ಉಡುಪಿ ಉಪಹಾರ, ಜಿ.ಕೆ.ಎಸ್. ಹೋಟೆಲ್, ಹಂಪಿ ಎಕ್ಸ್‌ಪ್ರೆಸ್ ಕೆಫೆ ಹಾಗೂ ಸಂಧ್ಯಾ ಹೋಟೆಲ್‌ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು.
ತಪಾಸಣೆ ವೇಳೆ ಅವಧಿ ಮೀರಿದ, ಲೇಬಲ್ ಇಲ್ಲದ ಹಾಗೂ ಬಣ್ಣಯುಕ್ತ ಆಹಾರ ಪದಾರ್ಥಗಳು ಪತ್ತೆಯಾಗಿದ್ದು, ಅಧಿಕಾರಿಗಳು ಅವುಗಳನ್ನು ವಶಪಡಿಸಿಕೊಂಡರು. ವಶಪಡಿಸಿಕೊಂಡ ಪದಾರ್ಥಗಳಲ್ಲಿ ಸುಮಾರು 14 ಕೆಜಿ ಚಿಕನ್, 2 ಕೆಜಿ ಮೀನು, 8 ಕೆಜಿ ಪನ್ನೀರ್, 36 ಬಾಟಲ್‌ಗಳ ಮೀರಿಂಡಾ, ಪೆಪ್ಪಿ ಹಾಗೂ ಸೆವನ್ ಅಪ್, 4 ಪ್ಯಾಕೆಟ್ ಬ್ರೂ ಕಾಫಿ ಪುಡಿ, 800 ಮಿ.ಲೀ. ಸಲಾಡ್ ಎಣ್ಣೆ, 3 ಕೆಜಿ ಗೋಬಿ, 1 ಕೆಜಿ ಪಿಜ್ಜಾ ಬ್ರೆಡ್ ಹಾಗೂ 4 ಕೆಜಿ ಉಪ್ಪಿನಕಾಯಿ ಸೇರಿವೆ.
ಹೋಟೆಲ್‌ಗಳಲ್ಲಿ ಸ್ವಚ್ಛತೆ ಕಾಪಾಡದಿರುವುದು ಸೇರಿದಂತೆ ನಿಯಮ ಉಲ್ಲಂಘನೆಗಳು ಕಂಡುಬಂದ ಹಿನ್ನೆಲೆಯಲ್ಲಿ ಸಂಬಂಧಪಟ್ಟವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.




