ಕೊಪ್ಪಳ: ಈವರೆಗೂ ಸಮೀಕ್ಷಾ ಕಾರ್ಯ ಕೈಗೊಳ್ಳದ ಶಿಕ್ಷಕ ಅಮಾನತು

ಕೊಪ್ಪಳ: ಯಾವುದೇ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳದೇ ಮತ್ತು ಅಧಿಕಾರಿಗಳ ಸಂಪರ್ಕಕ್ಕೆ ಸಿಗದೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಮಗೆ ವಹಿಸಿದ ಕಾರ್ಯವನ್ನು ಕೈಗೊಳ್ಳದೇ ಗಂಭೀರ ಸ್ವರೂಪದ ಕರ್ತವ್ಯಲೋಪವೆಸಗಿದ ಆರೋಪದಲ್ಲಿ ಶಿಕ್ಷಕ ರಾಮಪ್ಪ ತಳವಾರ ಎಂಬವರನ್ನು ಅಮಾನತು ಮಾಡಲಾಗಿದೆ.
ಸಮೀಕ್ಷೆಯಲ್ಲಿ ಮೇಲ್ವಿಚಾರಕ ದಾವಲಸಾಬ ಮುಲ್ಲಾ, ಸಿ.ಆರ್.ಪಿ ಅವರು ನೀಡಿದ ವರದಿಯ ಆಧಾರದ ಮೇಲೆ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ಸಂಬಂಧಿಸಿದಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜೂಲಕುಂಟಿಯ ಶಿಕ್ಷಕ ರಾಮಪ್ಪ ತಳವಾರ ಅವರು ಈವರೆಗೂ ತಮಗೆ ವಹಿಸಿದ ಯಾವುದೇ ಮನೆಯ ಸಮೀಕ್ಷೆ ಕಾರ್ಯವನ್ನು ಕೈಗೊಂಡಿಲ್ಲ ಮತ್ತು ಎರಡು ದಿನಗಳಿಂದ ಮೊಬೈಲ್ ಸ್ವಿಚ್ ಆಫ್ ಮಾಡಿದ್ದು, ಅವರ ಮನೆಗೆ ಭೇಟಿ ನೀಡಿದಾಗಲೂ ಯಾವುದೇ ನಿಖರ ಮಾಹಿತಿ ಲಭ್ಯವಾಗಿರುವುದಿಲ್ಲ. ಈ ಕಾರಣದಿಂದ ಸಮೀಕ್ಷೆ ಕಾರ್ಯಕ್ಕೆ ತೊಂದರೆಯುಂಟಾಗಿದೆ ಸಮೀಕ್ಷೆಯಲ್ಲಿ ಮೇಲ್ವಿಚಾರಕರು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು.
ಈ ವರದಿಯ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ಗಂಭೀರ ಸ್ವರೂಪದ ಕರ್ತವ್ಯಲೋಪ ಎಸಗಿರುವುದು ಹಾಗೂ ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು 2021ರ ನಿಯಮ (3) ರ ಉಪ ನಿಯಮ 1(i)(ii)(i), 2(iii), 2(iv)ನ್ನು ಉಲ್ಲಂಘಿಸಿರುವುದು ಕಂಡುಬಂದಿದ್ದು, ನೌಕರರ ವಿರುದ್ಧ ಹೊರಿಸಲಾದ ಆರೋಪಗಳ ಬಗ್ಗೆ ಇಲಾಖಾ ವಿಚಾರಣೆ ಬಾಕಿ ಇರಿಸಿ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957 ನಿಯಮ 10(8)(2) ರನ್ವಯ ಸದರಿಯವರನ್ನು ಸೇವೆಯಿಂದ ಅಮಾನತ್ತುಗೊಳಿಸುವುದು ಸೂಕ್ತವೆಂದು ಕಂಡು ಬಂದಿದ್ದು ತಕ್ಷಣದಿಂದ ಜಾರಿಗೆ ಬರುವಂತೆ ರಾಮಪ್ಪ ತಳವಾರ ಅವರನ್ನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10(8)(2) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.
ಸದರಿ ನೌಕರರು ಅಮಾನತ್ತಿನ ಅವಧಿಯಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 98 ರನ್ವಯ ಜೀವನಾಂಶ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಹಾಗೂ ಕಚೇರಿ ಮುಖ್ಯಸ್ಥರ ಅನುಮತಿ ಇಲ್ಲದೇ ಕೇಂದ್ರಸ್ಥಾನಬಿಡತಕ್ಕದ್ದಲ್ಲ ಎಂದು ನಿರ್ದೇಶಿಸಿದ್ದಾರೆ.







