Koppal | ಇಸ್ಲಾಂ–ಲಿಂಗಾಯತ ಧರ್ಮಗಳಲ್ಲಿ ಹಲವು ಸಾಮ್ಯತೆಗಳಿವೆ: ಲಾಲ್ ಹುಸೇನ್ ಕಂದಗಲ್

ಕೊಪ್ಪಳ: ಇಸ್ಲಾಂ ಹಾಗೂ ಲಿಂಗಾಯತ ಧರ್ಮಗಳಲ್ಲಿ ಹಲವು ವಿಚಾರಗಳಲ್ಲಿ ಹೊಂದಾಣಿಕೆ ಇರುವುದಾಗಿ ವಾಗ್ಮಿ ಲಾಲ್ ಹುಸೇನ್ ಕಂದಗಲ್ ಹೇಳಿದರು.
ನಗರದಲ್ಲಿ ವಿಜನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಇಫ್ತಾರ್ ಸೌಹಾರ್ದ ಕೂಟದಲ್ಲಿ ಮಾತನಾಡಿದ ಅವರು, ಉಪವಾಸ ಎಂದರೆ ಕೇವಲ ಆಹಾರ ತ್ಯಜಿಸುವುದಲ್ಲ, ಪಂಚೇಂದ್ರಿಯಗಳ ಮೇಲೆ ನಿಯಂತ್ರಣ ಸಾಧಿಸುವುದಾಗಿದೆ ಎಂದು ಹೇಳಿದರು. ಉಪವಾಸದಲ್ಲಿದ್ದು ಸುಳ್ಳು ಹೇಳಿದರೆ ಅದರ ಅರ್ಥವೇ ಇಲ್ಲ. ಹಿಂದೂ ಧರ್ಮದಲ್ಲಿಯೂ ಉಪವಾಸದ ಕಲ್ಪನೆ ಇದೆ. ಬೈಬಲ್ ಹಾಗೂ ಬೌದ್ಧ ಧರ್ಮದಲ್ಲಿಯೂ ಉಪವಾಸದ ಉಲ್ಲೇಖ ಕಾಣಬಹುದು ಎಂದು ತಿಳಿಸಿದರು.
ಉಪವಾಸದ ಕುರಿತು ಕುರಾನ್‌ನ ಕಲ್ಪನೆಗಳನ್ನು ವಿವರಿಸಿದ ಅವರು, ಒಬ್ಬ ವ್ಯಕ್ತಿ ಯಾರೂ ಇಲ್ಲದ ಸ್ಥಳದಲ್ಲಿ ಆಹಾರ ಸೇವಿಸಿ ಬಂದು ಉಪವಾಸ ಇದ್ದೇನೆ ಎಂದು ಹೇಳಬಹುದು. ಆದರೆ ದೇವರ ಭಯ ಮತ್ತು ದೇವರ ಆದೇಶ ಪಾಲಿಸುವ ನಂಬಿಕೆ ಇರುವುದರಿಂದ ಯಾರೂ ಆ ರೀತಿಯಲ್ಲಿ ವರ್ತಿಸುವುದಿಲ್ಲ ಎಂದರು.
ಉಪವಾಸ ಬಿಡುವ ಸಂದರ್ಭದಲ್ಲಿ ಉಪವಾಸಿಗನೊಂದಿಗೆ ಸೇರಿ ಉಪವಾಸ ಇಲ್ಲದವರು ಆಹಾರ ಸೇವಿಸಿದರೂ ಉಪವಾಸಿಗನಿಗೆ ಸಿಗುವಷ್ಟು ಪುಣ್ಯ ಸಿಗುತ್ತದೆ ಎಂದು ಪ್ರವಾದಿಗಳು ಹೇಳಿದ್ದಾರೆ. ನಮಾಜ್, ಹಜ್ ಮತ್ತು ಉಪವಾಸ ಮಾಡುವುದಕ್ಕಿಂತಲೂ ನಾಲಿಗೆಯ ಮೇಲೆ ನಿಯಂತ್ರಣ ಸಾಧಿಸುವುದು ಮುಖ್ಯವಾಗಿದೆ. ನಮ್ಮ ನಾಲಿಗೆಯಿಂದ ಮತ್ತೊಬ್ಬರ ಜೀವಕ್ಕೂ ಅಪಾಯವಾಗಬಹುದು, ಜೀವನಕ್ಕೂ ಅರ್ಥ ಸಿಗಬಹುದು. ಆದ್ದರಿಂದ ಗೌರವಯುತ ಮಾತುಗಳನ್ನು ಬಳಕೆ ಮಾಡಬೇಕು ಎಂದು ಹೇಳಿದರು.
ಯಾವ ದೇವರ ಭಯದಿಂದ ನಾವು ಉಪವಾಸ ಇದ್ದೇವೋ, ಅದೇ ದೇವರ ಭಯವನ್ನು ಭ್ರಷ್ಟಾಚಾರ, ಅನಾಚಾರ, ಕೊಲೆ ಹಾಗೂ ಕೋಮುವಾದಕ್ಕೆ ಪ್ರಚೋದನೆ ನೀಡುವ ಸಂದರ್ಭದಲ್ಲೂ ನೆನಪಿಸಿಕೊಳ್ಳಬೇಕು. ಧರ್ಮ ಹಾಗೂ ಜಾತಿಗಳ ಆಧಾರದಲ್ಲಿ ಸಮಾಜವನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಚೋದನಕಾರಿ ಮಾತುಗಳಿಗೆ ಬಲಿಯಾಗಬಾರದು ಎಂದು ಅವರು ಕಿವಿಮಾತು ಹೇಳಿದರು.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಅನ್ಯಾಯವಾಗಿ ಒಬ್ಬ ಮನುಷ್ಯನನ್ನು ಕೊಂದರೆ ಇಡೀ ಮಾನವೀಯತೆಯನ್ನು ಕೊಂದ ಪಾಪವಾಗುತ್ತದೆ ಎಂದು ಕುರಾನ್ ಹೇಳುತ್ತದೆ. ಯುದ್ಧಕ್ಕೆ ಅರ್ಥವಿಲ್ಲ ಎಂದು ಹೇಳಿದರು.
ಲಿಂಗಾಯತ ಧರ್ಮದ ರಾಜ್ಯಾಧ್ಯಕ್ಷ ಈಶಣ್ಣ ಕೊರ್ಲಳ್ಳಿ ಮಾತನಾಡಿ, ಇಂತಹ ಸೌಹಾರ್ದ ಕೂಟಗಳಲ್ಲಿ ಸರ್ಕಾರಿ ಅಧಿಕಾರಿಗಳು ಸಹ ಭಾಗವಹಿಸಬೇಕು. ಈ ಕಾರ್ಯಕ್ರಮಗಳು ಕೇವಲ ಮುಸ್ಲಿಂ ಸಮುದಾಯಕ್ಕೆ ಸೀಮಿತವಾಗಿಲ್ಲ, ಎಲ್ಲಾ ಧರ್ಮಗಳ ಜನರು ಭಾಗವಹಿಸುವ ವೇದಿಕೆಗಳಾಗಿವೆ ಎಂದು ಹೇಳಿದರು.
ಜಕಾತ್ ಸೇರಿದಂತೆ ಹಲವು ವಿಚಾರಗಳಲ್ಲಿ ಇಸ್ಲಾಂ ಮತ್ತು ಲಿಂಗಾಯತ ಧರ್ಮಗಳ ನಡುವೆ ಸಾಮ್ಯತೆಗಳಿವೆ. ರಂಜಾನ್ ಮಾಸದಲ್ಲಿ ಅಂತರಂಗ ಹಾಗೂ ಬಹಿರಂಗ ಶುದ್ಧಿಯನ್ನು ಒತ್ತಿ ಹೇಳಲಾಗುತ್ತದೆ. ಬಸವಣ್ಣನವರ ಉಪದೇಶದಲ್ಲಿಯೂ ಶುದ್ಧಿಯ ಮಹತ್ವವನ್ನು ವಿವರಿಸಲಾಗಿದೆ ಎಂದು ಹೇಳಿದರು.
ಪ್ರವಾದಿ ಮುಹಮ್ಮದ್ ಅವರ ಜೀವನದಲ್ಲಿ ಕಂಡುಬರುವ ಸಹಿಷ್ಣುತೆ ಮತ್ತು ಉದಾರತೆಯ ಘಟನೆಗಳನ್ನು ನೆನಪಿಸಿದ ಅವರು, ಪ್ರವಾದಿಗಳ ಮೇಲೆ ಕಸ ಹಾಕುತ್ತಿದ್ದ ಮಹಿಳೆ ಒಂದು ದಿನ ಕಸ ಹಾಕದಿದ್ದಾಗ ಅವರ ಆರೋಗ್ಯ ವಿಚಾರಿಸಿದ ಉದಾಹರಣೆ ನಮಗೆ ಮಾದರಿಯಾಗಿದೆ. ಜ್ಞಾನ ಎಲ್ಲಿಂದ ಬಂದರೂ ಸ್ವೀಕರಿಸಬೇಕು ಎಂಬ ಸಂದೇಶವನ್ನು ಎಲ್ಲ ಧರ್ಮಗಳು ನೀಡುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಹೀದ್ ತಹಶಿಲ್ದಾರ್ ವಹಿಸಿದ್ದರು. ಅತಿಥಿಗಳಾಗಿ ಆಗಮಿಸಿದ್ದ ಬಸವರಾಜ್ ಬಳೂಳ್ಳಿ ಹಾಗೂ ವೈದ್ಯ ಸುಶೀಲ್ ಕುಮಾರ್ ಕಲಾಲ್ ಸಹ ಮಾತನಾಡಿದರು.







