Koppal | 40 ಸಾವಿರ ರೂ. ಲಂಚ ಪಡೆಯುತ್ತಿದ್ದ ಗ್ರಾಮ ಆಡಳಿತಾಧಿಕಾರಿ, ಗ್ರಾಮ ಸಹಾಯಕ ಲೋಕಾಯುಕ್ತ ಬಲೆಗೆ

ಕೊಪ್ಪಳ: ವಿಲ್ ಮೂಲಕ ಬಂದಿರುವ ಜಮೀನಿನ ಉತಾರವನ್ನು ತಮ್ಮ ಹೆಸರಿಗೆ ಮಾಡಿಸಿಕೊಡಲು 40 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಸಂಗಾಪುರದ ಗ್ರಾಮ ಆಡಳಿತಾಧಿಕಾರಿ ಹಾಗೂ ಗ್ರಾಮ ಸಹಾಯಕ ಅ.6ರಂದು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಸಂಗಾಪುರದ ಗ್ರಾಮ ಆಡಳಿತಾಧಿಕಾರಿ ಸೋಮನಾಥ ಟಿ. ಹಾಗೂ ಗ್ರಾಮ ಸಹಾಯಕ ಹನುಮೇಶ ಬಂಡಿ ಆಂಜನೇಯ ಬಂಧಿತ ಆರೋಪಿಗಳು.
ಗಂಗಾವತಿ ತಾಲೂಕಿನ ಅಂಜನಹಳ್ಳಿ ನಿವಾಸಿ ರಾಮು ತಂದೆ ವೆಂಕಟೇಶ ಅವರಿಗೆ ತಮ್ಮ ಸಣ್ಣಜ್ಜನಿಂದ ವಿಲ್ ಮೂಲಕ ಜಮೀನು ಬಂದಿತ್ತು. ಈ ಜಮೀನಿನ ದಾಖಲೆಗಳನ್ನು (ಉತಾರ) ತಮ್ಮ ಹೆಸರಿಗೆ ಮಾಡಿಸಿಕೊಡುವಂತೆ ಅವರು ಗಂಗಾವತಿ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಕೆಲಸ ಮಾಡಿಕೊಡಲು ಗ್ರಾಮ ಆಡಳಿತಾಧಿಕಾರಿ ಸೋಮನಾಥ ಟಿ. ಹಾಗೂ ಗ್ರಾಮ ಸಹಾಯಕ ಹನುಮೇಶ ಅವರು 40 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ಕುರಿತು ರಾಮು ಅವರು ಅ.5ರಂದು ಕೊಪ್ಪಳದ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಮಂಗಳವಾರ (ಅ.6) ಮಧ್ಯಾಹ್ನ ಸುಮಾರು 12.40ರ ವೇಳೆಗೆ ಫಿರ್ಯಾದಿ ರಾಮು ಅವರಿಂದ 40 ಸಾವಿರ ರೂ. ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಇಬ್ಬರನ್ನೂ ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಆರೋಪಿಗಳಿಂದ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ರಾಯಚೂರು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿದ್ದರಾಜು ಸಿ. ಅವರ ಮಾರ್ಗದರ್ಶನದಲ್ಲಿ, ಕೊಪ್ಪಳ ಲೋಕಾಯುಕ್ತ ಡಿವೈಎಸ್‌ಪಿ ವಿಜಯ ಬಿರಾದಾರ, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಸುನೀಲ ಮೇಗಲಮನಿ, ಶೈಲಾ ಎಸ್. ಪ್ಯಾಟಿಶೆಟ್ಟರ್ ಹಾಗೂ ಸಿಬ್ಬಂದಿಯ ತಂಡ ಈ ಟ್ರ್ಯಾಪ್ ಕಾರ್ಯಾಚರಣೆ ನಡೆಸಿದೆ ಎಂದು ಕೊಪ್ಪಳ ಲೋಕಾಯುಕ್ತ ಕಚೇರಿಯ ಪ್ರಕಟಣೆ ತಿಳಿಸಿದೆ.






