ಕೊಪ್ಪಳ | ಪೊಲೀಸ್ ತರಬೇತಿ ವೇಳೆ ಆಕಸ್ಮಿಕವಾಗಿ ಸಿಡಿದ ಗುಂಡು; ಮಹಿಳೆಗೆ ಗಂಭೀರ ಗಾಯ

ಕೊಪ್ಪಳ : ಪೊಲೀಸ್ ಇಲಾಖೆಯಿಂದ ಗುಂಡು ಹಾರಿಸುವುದನ್ನು ಅಭ್ಯಾಸ ಮಾಡುವ ವೇಳೆ ಕುರಿಗಾಹಿ ಮಹಿಳೆಗೆ ಗುಂಡು ತಗುಲಿ ಗಂಭೀರ ವಾಗಿ ಗಾಯಗೊಂಡಿರುವ ಘಟನೆ ಗಂಗಾವತಿ ತಾಲೂಕಿನ ಜಬ್ಬಲಗುಡ್ಡ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ದ್ರಾಕ್ಷಾಯಿನಿ ರೇಣುಕಾ ( 34) ಗುಂಡು ತಗುಲಿ ಗಾಯಗೊಂಡಿರುವ ಮಹಿಳೆ ಎಂದು ತಿಳಿದುಬಂದಿದೆ.
ದ್ರಾಕ್ಷಾಯಿನಿ ಹೊಲದಲ್ಲಿ ಕುರಿಹಟ್ಟಿಯಿಂದ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಬಂದಿದ್ದ ವೇಳೆ, ಪೊಲೀಸರಿಂದ ಹಾರಿಸಲಾದ ಗುಂಡು ಅಚಾನಕ್ ಎಡ ಕೈ ಗೆ ತಗುಲಿದ್ದು, ಮಹಿಳೆಯ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಗಾಯಗೊಂಡ ಮಹಿಳೆಯನ್ನು ತಕ್ಷಣವೇ ಮುನಿರಾಬಾದ್ ಡ್ಯಾಂ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಮುನೀರಾಬಾದ್ ಡ್ಯಾಂ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಶಸ್ತ್ರ ಮೀಸಲು ಪಡೆಯ ಡಿಎಸ್ಪಿ ಶಶಿಧರ್ ಹಿರೇಮಠ್ ಕೊಪ್ಪಳ, ಪಿಎಸ್ಐ ಸುನಿಲ್ ಎಚ್ ಹಾಗೂ ಮಹಾಂತೇಶ್ ಆರ್.ಪಿ.ಐ ಭೇಟಿ ನೀಡಿ, ಮಹಿಳೆಯ ಆರೋಗ್ಯ ವಿಚಾರಿಸಿದ್ದಾರೆ.
ಸ್ಥಳೀಯ ಗ್ರಾಮಸ್ಥರು ಮತ್ತು ರೈತರು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.







