Koppal | ಕೂಲಿ ಕೆಲಸಕ್ಕೆ ಹೋಗುವುದನ್ನು ತಪ್ಪಿಸಿಕೊಳ್ಳಲು ಎಐನಲ್ಲಿ ಹುಲಿ ಚಿತ್ರ ಸೃಷ್ಟಿಸಿದ ಯುವಕ !
50 ಬಸ್ಕಿ ಹೊಡೆಸಿ ಅರಣ್ಯ ಇಲಾಖೆಯಿಂದ ಎಚ್ಚರಿಕೆ

ಕೊಪ್ಪಳ : ಕೂಲಿ ಕೆಲಸಕ್ಕೆ ಹೋಗುವುದನ್ನು ತಪ್ಪಿಸಿಕೊಳ್ಳಲು ಯುವಕನೊಬ್ಬ ಕೃತಕ ಬುದ್ಧಿಮತ್ತೆ (AI) ಬಳಸಿ ಹುಲಿಯ ನಕಲಿ ಚಿತ್ರ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಘಟನೆ ಕೊಪ್ಪಳ ತಾಲೂಕಿನ ಕವಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಕವಳಿ ಗ್ರಾಮದ ಈರಣ್ಣ ಎಂಬ ಯುವಕ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಮನೆಯವರು ಕೂಲಿ ಕೆಲಸಕ್ಕೆ ತೆರಳುವಂತೆ ಹೇಳಿದ್ದರಿಂದ, ಗುಡ್ಡದಲ್ಲಿ ಹುಲಿ ಕಾಣಿಸಿಕೊಂಡಿದೆ ಎಂಬಂತೆ ಎಐ ಮೂಲಕ ಚಿತ್ರ ಸೃಷ್ಟಿಸಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಪರಿಶೀಲನೆ ವೇಳೆ ಯಾವುದೇ ಹುಲಿ ಕಾಣಿಸದ ಹಿನ್ನೆಲೆಯಲ್ಲಿ, ವೈರಲ್ ಆಗಿದ್ದ ಚಿತ್ರ ಎಐ ತಂತ್ರಜ್ಞಾನದಿಂದ ಸೃಷ್ಟಿಸಲಾದ ನಕಲಿ ಚಿತ್ರ ಎಂಬುದು ಬಹಿರಂಗವಾಗಿದೆ. ನಂತರ ಯುವಕನನ್ನು ವಿಚಾರಿಸಿದಾಗ, ಕೂಲಿ ಕೆಲಸಕ್ಕೆ ಹೋಗುವುದನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದಲೇ ಈ ಚಿತ್ರವನ್ನು ಸೃಷ್ಟಿಸಿ ಹಂಚಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಯುವಕನಿಗೆ ಬುದ್ಧಿವಾದ ಹೇಳಿ, 50 ಬಸ್ಕಿ ಹೊಡೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ಅಧಿಕಾರಿಗಳು, ಎಐ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ಸುಳ್ಳು ಮಾಹಿತಿ ಹರಡುವುದರಿಂದ ಸಾರ್ವಜನಿಕರಲ್ಲಿ ಅನಗತ್ಯ ಆತಂಕ ಉಂಟಾಗುವುದರ ಜೊತೆಗೆ, ಇಲಾಖೆಯ ಸಮಯ ಮತ್ತು ಸಂಪನ್ಮೂಲವೂ ವ್ಯರ್ಥವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.






