ಕೊಪ್ಪಳ: ಝೀರೋ ಟ್ರಾಫಿಕ್ ಪ್ರಯತ್ನ ವಿಫಲ; ಚಿಕಿತ್ಸೆಗೆ ಸ್ಪಂದಿಸದೆ ನವಜಾತ ಶಿಶು ಮೃತ್ಯು

ಕೊಪ್ಪಳ: ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದ ನವಜಾತ ಶಿಶು ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.
ಕುಕನೂರು ಸರ್ಕಾರಿ ಆಸ್ಪತ್ರೆಯಲ್ಲಿ ರವಿವಾರ ರಾತ್ರಿ ಜನಿಸಿದ ಶಿಶುವಿನ ಕರುಳುಗಳು ಹೊರಬಂದಿದ್ದರಿಂದ ಪ್ರಾಥಮಿಕವಾಗಿ ಕೊಪ್ಪಳದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶಿಶುವಿನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲು ನಿರ್ಧರಿಸಲಾಯಿತು.
ಶಿಶುವಿನ ಜೀವ ಉಳಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ತಕ್ಷಣ ಸ್ಪಂದಿಸಿ, ಕೊಪ್ಪಳದಿಂದ ಹುಬ್ಬಳ್ಳಿವರೆಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿತು. ಐದು ಅಂಬುಲೆನ್ಸ್‌ಗಳ ಸಹಕಾರದೊಂದಿಗೆ ಶಿಶುವನ್ನು ಸುರಕ್ಷಿತವಾಗಿ ಹುಬ್ಬಳ್ಳಿಗೆ ತಲುಪಿಸಲಾಯಿತು.
ಆದರೆ ಶಿಶುವಿನ ಸ್ಥಿತಿ ಅತೀ ಗಂಭೀರವಾಗಿದ್ದ ಕಾರಣ ಎಲ್ಲ ಪ್ರಯತ್ನಗಳ ನಡುವೆಯೂ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಶಿಶು ಮೃತಪಟ್ಟಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.





