ಕೊಪ್ಪಳ | ಪಾದಯಾತ್ರೆ ಹೊರಟಿದ್ದ ಯಾತ್ರಿಕರಿಗೆ ಬಸ್ ಢಿಕ್ಕಿ : ಮೂವರು ಮೃತ್ಯು

ಕೊಪ್ಪಳ: ಹುಲಿಗೆಮ್ಮ ದೇವಾಲಯಕ್ಕೆ ಪಾದಯಾತ್ರೆ ಹೊರಟಿದ್ದ ಯಾತ್ರಿಕರ ಮೇಲೆ ಖಾಸಗಿ ಸ್ಲೀಪರ್ ಕೋಚ್ ಬಸ್ ಹರಿದ ಪರಿಣಾಮ ಮೂವರು ಮೃತಪಟ್ಟಿರುವ ಘಟನೆ ಕೊಪ್ಪಳ ತಾಲ್ಲೂಕಿನ ಕೂಕನಪಳ್ಳಿ ಗ್ರಾಮದಲ್ಲಿರುವ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ನಡೆದಿದೆ.
ಮೃತರನ್ನು ಅನ್ನಪೂರ್ಣ (40), ಪ್ರಕಾಶ್ (25), ಶರಣಪ್ಪ (19) ಎಂದು ಗುರುತಿಸಲಾಗಿದೆ. ಗಾಯಾಳುಗಳಾದ ಮಲ್ಲಿಕಾರ್ಜುನ ಮ್ಯಾಗೇರಿ, ಆದಪ್ಪ ಅಂಡಿ, ಸಿದ್ದಪ್ಪ ಅಂಡಿ, ಕಸ್ತೂರಿಯವ್ವ ಮ್ಯಾಗೇರಿ ಅವರನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಮೃತರು ಗದಗ ಜಿಲ್ಲೆಯ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದವರಾಗಿದ್ದು, ಕಳೆದ ಎರಡು ದಿನಗಳ ಹಿಂದೆ ಹುಲಿಗೆಮ್ಮ ದೇವಾಲಯದ ಕಡೆಗೆ ಪಾದಯಾತ್ರೆ ಹೊರಟಿದ್ದರು ಎಂದು ತಿಳಿದು ಬಂದಿದೆ.
ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್ ಪಾದಯಾತ್ರಿಕರ ಮೇಲೆ ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಘಟನೆಯಲ್ಲಿ ನಾಲ್ವರು ಪಾದಯಾತ್ರಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಎಸ್‌ಪಿ ಡಾ.ರಾಮ್ ಅರಸಿದ್ದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ ಚಾಲಕ ಸಂತೋಷ್ ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರತ್ಯೇಕ ಘಟನೆಯಲ್ಲಿ ಬೈಕ್ ಢಿಕ್ಕಿ | ಪಾದಚಾರಿ ಮೃತ್ಯು :
ಹುಲಿಗೆಮ್ಮ ದೇವಾಲಯಕ್ಕೆ ಪಾದಯಾತ್ರೆ ಹೊರಟಿದ್ದ ಯಾತ್ರಿಕರೊಬ್ಬರಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕುಕನೂರು ತಾಲ್ಲೂಕಿನ ಬಾಣಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ–63 ರಲ್ಲಿ ನಡೆದಿದೆ.
ಮೃತರನ್ನು ವೀರೇಶ ಎಂದು ಗುರುತಿಸಲಾಗಿದ್ದು, ಬೈಕ್ ಸವಾರನಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.







