ಕೊಪ್ಪಳ | ಬಾಕಿ ಶುಲ್ಕ ಕಟ್ಟಿಲ್ಲವೆಂದು ತಾಳಿ, ಕಿವಿಯೋಲೆ ಬಿಚ್ಚಿಸಿಕೊಂಡ ಕಾಲೇಜು ಆಡಳಿತ ಮಂಡಳಿ

ಕೊಪ್ಪಳ/ಗಂಗಾವತಿ, ಸೆ.11: ವಿದ್ಯಾರ್ಥಿನಿಯು ಬಾಕಿ ಇರುವ ಶುಲ್ಕವನ್ನು ಪಾವತಿಸದಿರುವ ಕಾರಣದಿಂದ ವರ್ಗಾವಣೆ ಪ್ರಮಾಣ ಪತ್ರ(ಟಿಸಿ) ನೀಡಲು ನಿರಾಕರಿಸಿದ ಕಾಲೇಜು ಆಡಳಿತ ಮಂಡಳಿಯವರು ವಿದ್ಯಾರ್ಥಿನಿಯ ತಾಯಿಯ ಬಂಗಾರದ ತಾಳಿ ಹಾಗೂ ಕಿವಿಯ ಓಲೆಗಳನ್ನು ಬಿಚ್ಚಿಸಿಕೊಂಡಿದ್ದ ಅಮಾನವೀಯ ಘಟನೆ ಜಿಲ್ಲೆಯ ಗಂಗಾವತಿ ನಗರದ ಬಿಬಿಸಿ ನರ್ಸಿಂಗ್ ಕಾಲೇಜಿನಲ್ಲಿ ನಡೆದಿತ್ತು. ಆದರೆ ವಿಷಯ ಹೊರಗೆ ಬರುತ್ತಿದಂತೆಯೇ ಕಾಲೇಜು ಆಡಳಿತ ಮಂಡಳಿಯವರು ಪೋಷಕರ ಬಳಿ ಕ್ಷಮೆ ಕೇಳಿ ಅವರ ತಾಳಿ ಮತ್ತು ಕಿವಿಯೋಲೆಗಳನ್ನು ಹಿಂದಿರುಗಿಸಿದ್ದಾರೆ ಎಂದು ತಿಳಿದುಬಂದಿದೆ.
ಕಾವೇರಿ ಎಂಬ ವಿದ್ಯಾರ್ಥಿನಿ ಬಿಬಿಸಿ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ನಂತರ ಬೇರೆ ಕಾಲೇಜಿಗೆ ಸೇರಿಕೊಳ್ಳುತ್ತಿರುವುದರಿಂದ ಟಿಸಿ ನೀಡುವಂತೆ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ. ಆದರೆ ಕಾಲೇಜಿನ ಅಧ್ಯಕ್ಷ ಡಾ.ಸಿ.ಬಿ.ಚಿನಿವಾಲ ಅವರು, ಬಾಕಿ ಇರುವ ಶುಲ್ಕವನ್ನು ಒಂದೇಬಾರಿ ಪಾವತಿಸಿ ಟಿಸಿ ಪಡೆಯುವಂತೆ ಸೂಚಿಸಿದ್ದರು.
ಬಾಕಿ ಶುಲ್ಕ ಪಾವತಿಸಲು ಹಣವಿಲ್ಲ ಎಂದು ಹೇಳಿದಾಗ ಕಾಲೇಜಿನ ಅಧ್ಯಕ್ಷರು ವಿದ್ಯಾರ್ಥಿನಿ ತಾಯಿಯ ತಾಳಿ ಹಾಗೂ ಓಲೆಯನ್ನು ಒತ್ತೆಯಾಗಿ ಇಟ್ಟುಕೊಂಡಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು, ಕಾಲೇಜು ಆಡಳಿತ ಮಂಡಳಿ ತಾಳಿ ಮತ್ತು ಕಿವಿಯ ಓಲೆಯನ್ನು ವಾಪಸ್ ನೀಡಿರುವುದಾಗಿ ತಿಳಿದುಬಂದಿದೆ.
ಬಿಬಿಸಿ ನರ್ಸಿಂಗ್ ಕಾಲೇಜಿನಲ್ಲಿ ನಮ್ಮ ಮಗಳು 2ನೇ ವರ್ಷದ ಬಿಎಸ್‌ಸಿ ನರ್ಸಿಂಗ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಅಲ್ಲಿ ಶುಲ್ಕ ಹೆಚ್ಚಿರುವ ಕಾರಣ ನನ್ನ ಮಗಳು ಟಿಸಿ ಪಡೆಯಲು ಹೋಗಿದ್ದಳು. ಎರಡೇ ತಿಂಗಳು ಕಾಲೇಜಿಗೆ ಹೋಗಿರುವುದು 90 ಸಾವಿರ ರೂ. ಕೊಡಬೇಕಾಗಿತ್ತು. ಆದರೆ, ಕಾಲೇಜು ಸಿಬ್ಬಂದಿ ನಾಲ್ಕು ವರ್ಷದ ಹಣ ಕಟ್ಟಿ ಅಂದರು. ನಮ್ಮ ಬಳಿ ಹಣ ಇರಲಿಲ್ಲ. ಕಾಲೇಜಿಗೆ ಹೋಗಿ ನಾವು ಎರಡು ಮೂರು ಬಾರಿ ಕೇಳಿದರೂ ಅವರು ಟಿಸಿ ಕೊಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾಲೇಜು ಚೇರ್‌ಮನ್ ಡಾ.ಚಿನಿವಾಲ ಉಳಿದ ಹಣವನ್ನು ಪಾವತಿಸಲು ಆಗುವುದಿಲ್ಲವೆಂದರೆ ನಿಮ್ಮ ಬಳಿ ಇರುವ ಬಂಗಾರವನ್ನೆಲ್ಲ ಕೊಡಿ ಎಂದು ಒತ್ತಾಯಿಸಿದ್ದರು. ಇದರಿಂದಾಗಿ ಕಾವೇರಿಯ ತಾಯಿ ತಾಳಿಸರ, ಬೆಂಡೋಲೆ ಎಲ್ಲವನ್ನೂ ಬಿಚ್ಚಿಕೊಟ್ಟಿದ್ದು, ಬಳಿಕ ಟಿಸಿ ಪಡೆದಿದ್ದರು. ಈ ಸುದ್ದಿ ಗೊತ್ತಾಗಿ ಕಾಲೇಜು ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿದ್ದಂತೆಯೇ ತಾಳಿ ಮತ್ತು ಓಲೆಯನ್ನು ವಾಪಸ್ ನೀಡಿದ್ದಾರೆ.
- ಹನಮಂತಪ್ಪ ವಾಲಿಕಾರ್, ವಿದ್ಯಾರ್ಥಿನಿಯ ತಂದೆ







