ಕೊಪ್ಪಳ | ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿಗಳಿಗೆ ಮರಣ ದಂಡನೆ ವಿಧಿಸಿದ ನ್ಯಾಯಾಲಯ

ಶರಣು ಬಸವರಾಜ್, ಚೈತನ್ಯ ಸಾಯಿ, ಮಲ್ಲೇಶ್
ಕೊಪ್ಪಳ : ಕಳೆದ ವರ್ಷ ಸಣಾಪುರ ಕಾಲುವೆ ದಂಡೆಯ ಬಳಿ ನಡೆದಿದ್ದ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲಿನ ಅತ್ಯಾಚಾರ ಹಾಗೂ ಪ್ರವಾಸಿಗನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಗಂಗಾವತಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯವು ಮೂರು ಜನ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.
ಮಲ್ಲೇಶ್ ( ಹಂದಿಮಲ್ಲ), ಸಾಯಿ (ಚೈತನ್ಯಸಾಯಿ) ಮತ್ತು ಶರಣಪ್ಪ ( ಶರಣು ಬಸವರಾಜ್) ಶಿಕ್ಷೆ ವಿಧಿಸಲ್ಪಟ ಅಪರಾಧಿಗಳು.
ಘಟನೆಯ ಹಿನ್ನೆಲೆ :
ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ, ಐವರು ಪ್ರವಾಸಿಗರ ತಂಡ ಸಣಾಪುರ ಕೆರೆ ಬಳಿ ತೆರಳಿದ್ದ ವೇಳೆ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಈ ಸಂದರ್ಭದಲ್ಲಿ ಅಮೇರಿಕಾದ ಡೇನಿಯಲ್ ಸೇರಿದಂತೆ ಮೂವರು ಪ್ರವಾಸಿಗರನ್ನು ತುಂಗಭದ್ರಾ ಎಡದಂಡೆ ಕಾಲುವೆಗೆ ತಳ್ಳಲಾಗಿತ್ತು.
ಹಲ್ಲೆಯ ಪರಿಣಾಮ ಒಡಿಶಾ ಮೂಲದ ಬಿಬಾಶ್ ಎಂಬ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಇದೇ ವೇಳೆ ಇಸ್ರೇಲ್ ಮೂಲದ ಮಹಿಳೆ ಹಾಗೂ ಸ್ಥಳೀಯ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಲಾಗಿತ್ತು.
ಈ ಘಟನೆ ಆದ ಕೆಲವೇ ದಿನಗಳಲ್ಲಿ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.




