ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ಡಾ. ಸುರೇಶ್ ಬಿ. ಇಟ್ನಾಳ ದಿಢೀರ್ ಭೇಟಿ

ಕೊಪ್ಪಳ : ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ಡಾ.ಸುರೇಶ್ ಬಿ.ಇಟ್ನಾಳ ಅವರು ಸೋಮವಾರ ದಿಢೀರ್ ಭೇಟಿ ನೀಡಿ ಆಸ್ಪತ್ರೆಯಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿದರು. ಈ ವೇಳೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳ ಹಾಜರಾತಿಯನ್ನೂ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಆಸ್ಪತ್ರೆಯಲ್ಲಿ ಸ್ವಚ್ಛತೆ ಕಡ್ಡಾಯವಾಗಿ ಕಾಪಾಡಬೇಕು ಎಂದು ಸೂಚಿಸಿದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಚೀಟಿ ಪಡೆಯುವ ವೇಳೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಬೇಗನೆ ಚೀಟಿ ನೀಡಲು ಇನ್ನಷ್ಟು ಕೌಂಟರ್‌ಗಳನ್ನು ತೆರೆಯುವ ಜೊತೆಗೆ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಜಿಲ್ಲಾ ಆಸ್ಪತ್ರೆಯ ಸೈಕಿಯಾಟ್ರಿ ವಿಭಾಗದಲ್ಲಿ ರೋಗಿಗಳ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ ಇದೆಯೇ ಎಂಬುದನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಡ್ರಗ್ ಅಡಿಕ್ಟ್‌ಗಳಿಗೆ ದುಶ್ಚಟಗಳನ್ನು ಬಿಡಿಸಲು ಯಾವ ರೀತಿಯ ಕೌನ್ಸಿಲಿಂಗ್ ನೀಡಲಾಗುತ್ತಿದೆ ಎಂಬುದರ ಕುರಿತು ಮಾಹಿತಿ ಪಡೆದರು. ಡ್ರಗ್ ಅಡಿಕ್ಶನ್‌ನಂತಹ ದುಶ್ಚಟಗಳಿಗೆ ಜನರು ಬಲಿಯಾಗದಂತೆ ಹೆಚ್ಚಿನ ಜಾಗೃತಿ ಮೂಡಿಸುವಂತೆ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಸೇರಿದಂತೆ ಇತರೆ ಹಲವರು ಉಪಸ್ಥಿತರಿದ್ದರು.







