ಕೊಪ್ಪಳ | ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದ್ವೈಮಾಸಿಕ ಸಭೆ

ಕೊಪ್ಪಳ: ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಮುತುವರ್ಜಿ ವಹಿಸಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ತಮ್ಮ ಇಲಾಖಾವಾರು ಕಾನೂನು ಅರಿವು ನೆರವು ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸಬೇಕು ಎಂದು ಕೊಪ್ಪಳ ಜಿಲ್ಲೆಯ ಗಂಗಾವತಿ ಪೀಠದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವೇದಮೂರ್ತಿ ಬಿ.ಎಸ್. ಅವರು ಸೂಚನೆ ನೀಡಿದರು.
ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಪೋಕ್ಸೋ ನ್ಯಾಯಾಲಯದ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ದ್ವೈಮಾಸಿಕ ಸಭೆಯಲ್ಲಿ ವರ್ಚುವಲ್ ವೇದಿಕೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜುಲೈ 11ರಂದು ನಡೆಯುವ ರಾಷ್ಟ್ರೀಯ ಲೋಕ್ ಅದಾಲತ್ ಮತ್ತು ಆಗಸ್ಟ್ ನಲ್ಲಿ ನಡೆಯುವ ‘ಸಮಾಧಾನ ಸಮಾರೋಹ’ ವಿಶೇಷ ಲೋಕ್ ಅದಾಲತ್ ಹಾಗೂ ಈ ಎರಡು ತಿಂಗಳಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳ ಯಶಸ್ವಿಗೆ ಸರಕಾರದ ಸಹಕಾರ ಅತ್ಯವಶ್ಯಕವಾಗಿದ್ದು, ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದರು.
ಸಭೆಯಲ್ಲಿ ಕೊಪ್ಪಳ ಸಹಾಯಕ ಆಯುಕ್ತರಾದ ಮಹೆಬೂಬ್ ಜೀಲಾನಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಟಿ.ಕೃಷ್ಣಮೂರ್ತಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಆರ್.ಹೇಮಂತ ಕುಮಾರ್, ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಸಿಂಧು ಅಂಗಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ವಕೀಲರು, ನ್ಯಾಯಾಲಯದ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.






