ಕೊಪ್ಪಳ | ರಾಜ್ಯದಲ್ಲಿ ಡ್ರಗ್ಸ್ ಜಾಲ ವಿಸ್ತರಿಸಿದ್ದು, ಸರಕಾರ ಕಣ್ಮುಚ್ಚಿ ಕುಳಿತಿದೆ: ಹೇಮಲತಾ ನಾಯಕ ಆರೋಪ

ಕೊಪ್ಪಳ: ರಾಜ್ಯದಲ್ಲಿ ಡ್ರಗ್ಸ್ ಜಾಲ ವಿಸ್ತರಿಸಿದ್ದು, ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿ ದಾಳಿ ನಡೆಸಿ ಅಮಲಿನ ಜಾಲ ಭೇದಿಸಿದ್ದು, ರಾಜ್ಯ ಪೊಲೀಸರಿಗೆ ಮಾಹಿತಿ ಇಲ್ಲದಿರುವುದು ನಾಚಿಕಗೇಡಿನ ಸಂಗತಿ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಆರೋಪಿಸಿದರು.
ಅವರು ನಗರದ ಪತ್ರಿಕಾಭವನದಲ್ಲಿ ಮಂಗಳವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನಲ್ಲಿ ಮೂರು ಡ್ರಗ್ಸ್ ಕಾರ್ಖಾನೆ ಪತ್ತೆಯಾಗಿವೆ. 56 ಕೋಟಿ ರೂ. ಮೌಲ್ಯದ ಕಚ್ಛಾ ವಸ್ತು ದೊರೆತಿವೆ. ಮೂವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಿದರು.
ರಾಜಧಾನಿಯಲ್ಲಿ ಇಷ್ಟೆಲ್ಲ ನಡೆಯುತ್ತಿದ್ದರೂ ಸರ್ಕಾರದ ಗಮನಕ್ಕಿಲ್ಲವಾ ಅಥವಾ ಇವರೇ ಬೆಂಬಲ ನೀಡುತ್ತಿದ್ದಾರಾ ಎಂಬುದನ್ನು ಸ್ಪಷ್ಟಪಡಿಸಬೇಕು. ಶಾಲಾ ಮಕ್ಕಳ ಕೈಗೂ ಸುಲಭವಾಗಿ ಡ್ರಗ್ಸ್ ದೊರೆಯುತ್ತಿದೆ. ಮದ್ಯ ಮಾರಾಟ ಮಿತಿ ಮೀರಿದೆ. ಇದಕ್ಕೆ ಕಡಿವಾಣ ಹಾಕುವ ಬದಲು ಕುಡಿದು ಬಿದ್ದವರನ್ನು ಮನೆಗೆ ತಲುಪಿಸಲಾಗುವುದೆಂದು ಗೃಹ ಸಚಿವರು ಹೇಳಿರುವುದು ಲಜ್ಜೆಗೇಡಿತನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಪ್ಪಳದಲ್ಲಿ ಶಿಲ್ಪಾ ಗ್ರಾಂಡ್ ಹೋಟೆಲ್ ಹಿಂಭಾಗ, ಹಿಟ್ನಾಳ, ಮುನಿರಾಬಾದ್ ಹೀಗೆ ಎಲ್ಲ ಕಡೆಗಳಲ್ಲಿ ಇಸ್ಪೀಟ್ ದಂಧೆ ನಡೆಯುತ್ತಿದೆ. ನಮ್ಮ ಜಿಲ್ಲೆಯಲ್ಲಿ ಕಳೆದ 5 ವರ್ಷದಲ್ಲಿ ಪತ್ತೆಯಾದ ಡ್ರಗ್ಸ್ ಪ್ರಕರಣಗಳು, ವಶಪಡಿಸಿಕೊಂಡ ಗಾಂಜಾ ಮಾಹಿತಿಯನ್ನೂ ಸರಿಯಾಗಿ ನೀಡಿಲ್ಲ. ಅಧಿಕಾರಿಗಳು ನೀಡಿದ ಮಾಹಿತಿಯನ್ನು ಪರಾಮರ್ಶಿಸದೇ ಸಚಿವರು ಉತ್ತರ ಕೊಡುವ ಭಂಡತನ ಪ್ರದರ್ಶಿಸುತ್ತಿದ್ದಾರೆ. ಸಿಎಂ ತವರು ಜಿಲ್ಲೆ ಮೈಸೂರಿನಲ್ಲೂ ಡ್ರಗ್ಸ್ ಜಾಲ ಹಬ್ಬಿದೆ. ಹಲವು ಜಿಲ್ಲೆಗಳಲ್ಲೂ ಪೆಡ್ಲಿಂಗ್ ನಡೆಯುತ್ತಿದೆ. ಇದಕ್ಕೆಲ್ಲ ಕಡಿವಾಣ ಬೀಳುತ್ತಿಲ್ಲ ಎಂದು ಹೇಳಿದರು.
ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್, ಪ್ರಮುಖರಾದ ನೀಲಕಂಠಯ್ಯ ಹಿರೇಮಠ, ಮಹೇಶ ಅಂಗಡಿ, ಪ್ರಸಾದ ಗಾಳಿ ಇದ್ದರು.







