ಕೊಪ್ಪಳ | ಕುರುಬ ಸಮಾಜ ಮುಂದಕ್ಕೆ ಬರಲು ಶಿಕ್ಷಣವೇ ದಾರಿ : ಶ್ರೀ ನಿರಂಜನಾನಂದ ಸ್ವಾಮೀಜಿ

ಕೊಪ್ಪಳ: ಕುರುಬ ಸಮಾಜ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಇನ್ನೂ ಹಿಂದುಳಿದಿದೆ. ಸಮಾಜ ಜಾಗೃತಗೊಂಡು ಶಿಕ್ಷಣದ ಮೂಲಕ ಮುಂದಕ್ಕೆ ಬರಬೇಕು ಎಂದು ಕಾಗಿನೆಲೆ ಕನಕ ಗುರುಪೀಠಾಧ್ಯಕ್ಷರಾದ ಶ್ರೀ ನಿರಂಜನಾನಂದ ಸ್ವಾಮೀಜಿ ಕರೆ ನೀಡಿದರು.
ಕೊಪ್ಪಳ ನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಕನಕ ಗುರುಪೀಠದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅನೇಕ ಕಾರ್ಯಗಳು ನಡೆಯುತ್ತಿವೆ. ವಿಶೇಷವಾಗಿ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದ್ದು, ಹಿಂದುಳಿದ ಮಕ್ಕಳಿಗೆ ವಿದ್ಯಾಭ್ಯಾಸದ ಅವಕಾಶ ಒದಗಿಸಲು ವಿವಿಧ ಕಡೆ ಶಿಕ್ಷಣ ಸಂಸ್ಥೆಗಳು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಶಿಕ್ಷಣವೇ ಸಮಾಜದ ಅಭಿವೃದ್ದಿಗೆ ದಾರಿ. ಮಕ್ಕಳಿಗೆ ವಿದ್ಯಾಭ್ಯಾಸ ಕಲಿಸುವ ಮೂಲಕ ಸಮಾಜವನ್ನು ಮುಖ್ಯವಾಹಿನಿಗೆ ತರುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.
ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಅವರು, ಕನಕ ಗುರುಪೀಠದ ಸ್ಥಾಪನೆಯಿಂದ ಕುರುಬರು ರಾಜ್ಯದಲ್ಲಿ ಸಂಘಟಿತರಾಗಿದ್ದಾರೆ. ಸಮಾಜದ ಪ್ರತಿಷ್ಠೆ ಹೆಚ್ಚಲು ಗುರುಪೀಠವೇ ಕಾರಣ. ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಗುರುಗಳ ಸೇವೆ ಅಮೂಲ್ಯ ಎಂದು ಶ್ಲಾಘಿಸಿದರು.
ನೂರತ ಅಧಿಕಾರಿ ಮಲ್ಲೇಶಪ್ಪ ಹೊರಪೇಟೆ ಅವರು, ಕನಕ ಗುರುಪೀಠ ಹಾಗೂ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿಗಳ ಜೀವನಯಾನ ಮತ್ತು ಸೇವಾ ಚಟುವಟಿಕೆಗಳ ಕುರಿತು ವಿವರಿಸಿದರು.
ಕಾರ್ಯಕ್ರಮಕ್ಕೂ ಮೊದಲು ಸ್ವಾಮೀಜಿಗಳು ಶ್ರೀ ಗವಿಮಠಕ್ಕೆ ಭೇಟಿ ನೀಡಿ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳನ್ನು ಭೇಟಿಯಾಗಿ ಕುಷಲೋಪರಿ ವಿಚಾರಿಸಿದರು. ನಂತರ ಬಸವೇಶ್ವರ ವೃತ್ತದಿಂದ ಕಾಳಿದಾಸ ಶಾಲೆಯವರೆಗೆ ಡೊಳ್ಳು, ಭಾಜ, ಭಜಂತ್ರಿ, ಕುಂಭ, ಕಳಸದೊಂದಿಗೆ ಮೆರವಣಿಗೆ ಮೂಲಕ ಸ್ವಾಮೀಜಿಗಳನ್ನು ಕರೆದೊಯ್ಯಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಬಸವರಾಜ ಇಟ್ನಾಳ ಅಧ್ಯಕ್ಷತೆ ವಹಿಸಿದ್ದರು. ಬಾದಿಮನಾಳ ಕನಕ ಗುರುಪೀಠದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಾಲುಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ವಿವಿಧ ತಾಲೂಕು ಕುರುಬರ ಸಂಘದ ಅಧ್ಯಕ್ಷರು ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು.







