ಕೊಪ್ಪಳ | ಸಿಎಂ ಕಾರ್ಯಕ್ರಮಕ್ಕೆ ಬಂಜಾರ ಸಮಾಜದ ಘೇರಾವ್ : ಸುರೇಶ್ ಎಚ್ಚರಿಕೆ

ಕೊಪ್ಪಳ/ಕುಕನೂರು: ಕೊಪ್ಪಳದಲ್ಲಿ ಅ.6 ರಂದು ನಡೆಯಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರಿ ಕಾರ್ಯಕ್ರಮಕ್ಕೆ ಬಂಜಾರ ಸಮುದಾಯದ ಜನರು ಸಂಪೂರ್ಣವಾಗಿ ಬಹಿಷ್ಕಾರ ಹಾಕುತ್ತಿದ್ದಾರೆ. ಸರ್ಕಾರದ ನಿರ್ಲಕ್ಷ್ಯ ಮತ್ತು ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರದಲ್ಲಿ ಅನ್ಯಾಯ ಕಂಡು ಸಮುದಾಯ ಈ ಕ್ರಮಕ್ಕೆ ಮುಂದಾಗಿದೆ ಎಂದು ಗೋರ ಸೇನಾ ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಬಳೂಟಗಿ ತಿಳಿಸಿದರು.
ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಇಂದು ಗೋರ ಸೇನಾ ಸಮಿತಿ ಹಾಗೂ ಬಂಜಾರ ಸಮುದಾಯದ ಸದಸ್ಯರು ಪತ್ರಿಕಾಗೋಷ್ಠಿ ನಡೆಸಿ ತಮ್ಮ ಹೋರಾಟ ಕುರಿತು ಮಾಹಿತಿ ನೀಡಿದರು.
ನಾವು ಸರ್ಕಾರದ ನಿರ್ಲಕ್ಷ್ಯಕ್ಕೆ ವಿರುದ್ಧವಾಗಿ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದೇವೆ. ಆದರೆ ಯಾವುದೇ ಸ್ಪಂದನೆ ಇಲ್ಲದ ಕಾರಣ, ಭವಿಷ್ಯದಲ್ಲಿ ಹೋರಾಟ ಉಗ್ರ ಸ್ವರೂಪವನ್ನು ಹೊಂದಲಿದೆ. ಅ.17ರಂದು ಗದಗದಲ್ಲಿ ನಡೆಯಲಿರುವ ಅನಿರ್ದಿಷ್ಟಾವಧಿ ಹೋರಾಟಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಮಾಜ ಬಾಂಧವರು ಭಾಗವಹಿಸುವಂತೆ ಆಹ್ವಾನಿಸುತ್ತೇವೆ ಎಂದು ಸುರೇಶ್ ಬಳೂಟಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಹಂಪಣ್ಣ ಕಟ್ಟಿಮನಿ, ವಾಲಪ್ಪ ತಲ್ಲೂರು, ಯಮನೂರ ಭಾನಾಪೂರ, ಪ್ರಕಾಶ ಬಳಗೇರಿ, ಲಿಂಬಾನಾಯಕ, ರಾಘವೇಂದ್ರ ಬಳಗೇರಿ ಮತ್ತು ಚೇತನ ಬಳಗೇರಿ ಉಪಸ್ಥಿತರಿದ್ದರು.







