ಕೊಪ್ಪಳ | ಹಾಲವರ್ತಿಯಲ್ಲಿ ಗ್ರಾಮ ಪಂಚಾಯತ್ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಯ ಗ್ರಾಮ ಸಭೆ

ಕೊಪ್ಪಳ : ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀಯವರು ಕಂಡ ಕನಸಿನ ಗ್ರಾಮ ಸ್ವರಾಜ್ಯ ಮಾಡಲು ಎಲ್ಲರೂ ಶ್ರಮಿಸಬೇಕಿದೆ ಎಂದು ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಡಿ.ಆರ್.ಪಾಟೀಲ ಹೇಳಿದರು.
ಅವರು ಗುರುವಾರ ಕೊಪ್ಪಳ ತಾಲ್ಲೂಕಿನ ಹಾಲವರ್ತಿ ಗ್ರಾಮ ಪಂಚಾಯತ್ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಕೊಪ್ಪಳ ಹಾಗೂ ಗ್ರಾಮ ಪಂಚಾಯತ್ ಹಾಲವರ್ತಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 2026-27ನೇ ಸಾಲಿನ ಗ್ರಾಮ ಪಂಚಾಯತ್ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಯ ಗ್ರಾಮ ಸಭೆಯಲ್ಲಿ ಮಾತನಾಡಿದರು.
ಗ್ರಾಮ ಸಭೆಗಳನ್ನು ಆಯೋಜಿಸಿ 2026-27ನೇ ಸಾಲಿನ ಕ್ರಿಯಾಯೋಜನೆಗಳನ್ನು ಸಿದ್ದಪಡಿಸಬೇಕು. ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಾಗ ಜನರ ಬೇಡಿಕೆಗಳಿಗೆ ಆದ್ಯತೆ ನೀಡಬೇಕು. ಕಾಲಕಾಲಕ್ಕೆ ಗ್ರಾಮ ಸಭೆಗಳನ್ನು ನಡೆಸುವ ಮೂಲಕ ಜನರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ನೀಡಬೇಕು. ʼನಮ್ಮ ಸಹಭಾಗಿತ್ವದಲ್ಲಿʼ ಎಂಬ ನಂಬಿಕೆ ಜನರಲ್ಲಿ ಮೂಡಿಸಿದಾಗ ಅಧಿಕಾರ ಯೋಜನೆಗಳ ವಿಕೇಂದ್ರೀಕರಣವಾಗಲು ಸಾಧ್ಯವಾಗುತ್ತದೆ ಎಂದರು.
ಪಂಚಾಯತ್ ರಾಜ್ ವ್ಯವಸ್ಥೆ ಸ್ವರೂಪ ಕಾಣಲು ಸಾಧ್ಯವಾಗುತ್ತದೆ. ಹಾಗಾಗಿ ಜನರ ಸಹಭಾಗಿತ್ವಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಎಲ್ಲರನ್ನೂ ಸಮಾನವಾಗಿ ಕಂಡಾಗ ಮಾತ್ರ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ಎಲ್ಲಾ ಗ್ರಾಮೀಣ ಕುಟುಂಬಕ್ಕೆ ಸಂಪನ್ಮೂಲ ಜೋಡಿಸುವ ಕೆಲಸ ಆಗಬೇಕು. ಇದಕ್ಕಾಗಿ ಗ್ರಾಮೀಣ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ಅವುಗಳಿಗೆ ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು.
ಗ್ರಾಮ ಪಂಚಾಯತಿಗಳು ಗ್ರಾಮ ಸರ್ಕಾರಗಳಾಗಿ ಕಾರ್ಯನಿರ್ವಹಿಸಲು ಕಾನೂನಿನಲ್ಲಿ ಅವಕಾಶ ನೀಡಲಾಗಿದೆ. ಮಹಾತ್ಮಾ ಗಾಂಧಿಜೀಯವರ ಕನಸಿನ ಗ್ರಾಮ ಸ್ವರಾಜ್ಯ ಮತ್ತು ಗ್ರಾಮ ಸರ್ಕಾರವನ್ನು ಮಾಡಲು ನಾವೆಲ್ಲರೂ ಬದ್ಧರಾಗೋಣ. ಮನುಷ್ಯ ಯಾರು ಸಹ ಪರಿಪೂರ್ಣನಾಗಿರುವುದಿಲ್ಲ. ಅವನಲ್ಲಿ ಒಂದಲ್ಲ ಒಂದು ದೋಷಗಳಿರುತ್ತವೆ. ಅವುಗಳನ್ನು ಪ್ರತಿವರ್ಷ ಕಡಿಮೆ ಮಾಡಬೇಕು ಮತ್ತು ಒಳ್ಳೆಯ ಗುಣಗಳನ್ನು ಹೆಚ್ಚಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಗ್ರಾಮಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್, ಕರ್ನಾಟಕ ಗಾಂಧಿ ಸ್ಮಾರಕ ಭವನದ ಅಧ್ಯಕ್ಷರಾದ ನಾಡೋಜ ಉಡೇ ಪಿ.ಕೃಷ್ಣ ಮಾತನಾಡಿದರು.
ಸಭೆಯಲ್ಲಿ ಮಾಜಿ ಶಾಸಕರಾದ ಬಸವರಾಜ ಹಿಟ್ನಾಳ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಗೂಳೆಪ್ಪ ಹಲಗೇರಿ, ಜಿ.ಪಂ ಮುಖ್ಯ ಯೋಜನಾಧಿಕಾರಿ ಡಿ.ಮಂಜುನಾಥ, ಗಾಂಧಿ ಸ್ಮಾರಕ ನಿಧಿ ಕಾರ್ಯದರ್ಶಿ ಶಿವರಾಜ, ಹಾಲವರ್ತಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜಯಪ್ರದಾ ಗೊರವರ, ಉಪಾಧ್ಯಕ್ಷರಾದ ಮಹೇಂದ್ರ, ಸದಸ್ಯರಾದ ನಾಗರಾಜ, ಜ್ಞಾನಪ್ಪ ತಳಕಲ್, ಕೆ.ಸತೀಶ್, ಮಹಾಂತೇಶ ಹಾನಗಲ್ ಹಾಗೂ ಹನುಮಂತಪ್ಪ ಕಿಡದಾಳ, ಇಬ್ರಾಹಿಂ, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.







