ಕೊಪ್ಪಳ | ರಾಜ್ಯ ಸರಕಾರದ ವಿರುದ್ಧ ಜೆಡಿಎಸ್ ಪ್ರತಿಭಟನೆ

ಕೊಪ್ಪಳ : ರಾಜ್ಯ ಸರಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ ನಗರದ ಅಶೋಕ ವೃತ್ತದ ಬಳಿ ಕೊಪ್ಪಳ ಜಿಲ್ಲಾ ಜೆಡಿಎಸ್‌ನಿಂದ ಪ್ರತಿಭಟನೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ.ವಿ ಚಂದ್ರಶೇಖರ ಅವರು, ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಉತ್ತಮ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಸರಕಾರದ ಎಲ್ಲಾ ಇಲಾಖೆಗಳಲ್ಲಿ ಲಂಚಗುಳಿತನ, ಭ್ರಷ್ಟಾಚಾರ, ದುರಾಡಳಿತ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರದ ಸಚಿವರೇ ನೇರವಾಗಿ ಭಾಗಿಯಾಗಿರುವ ಬಗ್ಗೆ ಅದೇ ಪಕ್ಷದ ಹಿರಿಯ ಶಾಸಕರು ಮಾಧ್ಯಮದ ಮುಂದೆ ಸಾಕ್ಷಿ ಸಮೇತ ಆರೋಪಿಸಿರುವುದು ದುರಾಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇದಲ್ಲದೆ, ರಾಜ್ಯ ಸರಕಾರ ಇದುವರೆಗೂ ರಾಜ್ಯದ ಜನತೆಗೆ ಮೂಲಭೂತ ಸೌಕರ್ಯಗಳಾದ ರಸ್ತೆ, ಸೇತುವೆ, ನೀರಾವರಿ, ಕೆರೆಗಳ, ಚರಂಡಿ ವ್ಯವಸ್ಥೆ, ಕುಡಿಯುವ ನೀರು, ರೈತರಿಗೆ ವಿದ್ಯುತ್ ಮುಂತಾದವುಗಳನ್ನು ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಜೆಡಿಎಸ್ ಜಿಲ್ಲಾದ್ಯಕ್ಷ್ಯ ಸುರೇಶ ಭೂಮರೆಡ್ಡಿ ಮತ್ತು ರಾಜ್ಯ ಜೆಡಿಎಸ್ ಕಾರ್ಯದರ್ಶಿ ವಿರೇಶ ಮಹಾಂತಯ್ಯನಮಠ ಅವರು ಮಾತನಾಡಿದರು.
ಈ ಪ್ರತಿಭಟನೆಯಲ್ಲಿ ರಾಜ್ಯ ಜೆಡಿಎಸ್ ಯುವ ಘಟಕದ ಕಾರ್ಯಾಧ್ಯಕ್ಷ ರಾಜು ನಾಯಕ, ರಾಜ್ಯ ಕಾರ್ಯಕಾರಿಣಿ ಕಾರ್ಯದರ್ಶಿ ಶರಣಪ್ಪ ಕುಂಬಾರ ಕುಷ್ಟಗಿ, ಯಮನಪ್ಪ ಕಟಗಿ, ಮಲ್ಲನಗೌಡ ಕೋನನಗೌಡ್ರು, ಸೋಮಗೌಡ ಹೊಗರನಾಳ ಮತ್ತು ಮೌನೇಶ್ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.