ಕೊಪ್ಪಳ | ಬಾಲ್ಯವಿವಾಹ ನಿಷೇಧಕ್ಕೆ ಕೈಜೋಡಿಸಿ : ಮಹಾಂತಸ್ವಾಮಿ ಪೂಜಾರ

ಕೊಪ್ಪಳ : ಬಾಲ್ಯವಿವಾಹವು ಶಿಕ್ಷಾರ್ಹ ಅಪರಾಧವಾಗಿದ್ದು, ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಮೂಲಕ ಬಾಲ್ಯವಿವಾಹ ನಿಷೇಧಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ಹೇಳಿದರು.
ಅವರು ಬುಧವಾರ ಗಂಗಾವತಿಯ ಪಂಪನಗರದ ಶ್ರೀ ಕೊಟ್ಟೂರೇಶ್ವರ ಸಂಯುಕ್ತ ವಿಜ್ಞಾನ ಪದವಿ ಪೂರ್ವ ಕಾಲೇಜು ಮತ್ತು ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಪ್ಪಳ ಹಾಗೂ ಮಕ್ಕಳ ಸಹಾಯವಾಣಿ-1098, 112 ಮತ್ತು ವಿವಿಧ ಇಲಾಖೆಗಳು, ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ದತ್ತು ಮಾಸಾಚರಣೆ ಹಾಗೂ ಮಕ್ಕಳ ಮಾಸ ಆಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಬಾಲ್ಯವಿವಾಹ ನಿಷೇದ ಕಾಯ್ದೆ-2006 ಮತ್ತು ಪೋಕ್ಸೊ ಕಾಯ್ದೆ-2012 ಹಾಗೂ ದತ್ತು ಕಾರ್ಯಕ್ರಮದ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಿವಾಹವನ್ನು ಮಾಡುವುದರಿಂದ ಮಕ್ಕಳು ದೈಹಿಕ, ಮಾನಸಿಕ, ಶಾರೀರಿಕ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಅಲ್ಲದೇ, ಹುಟ್ಟುವ ಮಗುವು ವಿಕಲಚೇತನ ಅಪೌಷ್ಠಿಕ ಅಥವಾ ಶಿಶು ಮರಣ ಸಾಧ್ಯತೆ ಅಧಿಕವಾಗಿರುತ್ತದೆ. ತಾಯಿ ಅಥವಾ ಮಗು ಇಬ್ಬರು ಮೃತಪಡಬಹುದಾಗಿರುತ್ತದೆ. ಈ ಎಲ್ಲಾ ಅಂಶಗಳನ್ನು ಗಮನಿಸಿ ಸರ್ಕಾರವು ಬಾಲ್ಯವಿವಾಹ ನಿಷೇಧ ಕಾಯ್ದೆ-2006 ರನ್ನು ಜಾರಿಗೆ ತಂದಿರುತ್ತದೆ. ರಾಜ್ಯದಲ್ಲಿ ಬಾಲ್ಯವಿವಾಹ ಪ್ರಮಾಣಗಳು ಅಧಿಕವಾಗಿರುವುದನ್ನು ಗಮನಿಸಿ ಕರ್ನಾಟಕ ಸರ್ಕಾರವು ಮತ್ತಷ್ಟು ಪರಿಣಾಮಕಾರಿಯಾಗಿ ಈ ಕಾಯ್ದೆಯನ್ನು ಅನುಷ್ಠಾನಗೊಳಿಸಲು-2016ರಲ್ಲಿ ತಿದ್ದುಪಡಿಯನ್ನು ತಂದಿದೆ. ಅದರನ್ವಯ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮದುವೆಯನ್ನು ಮಾಡಿದವರಿಗೆ, ಭಾಗವಹಿಸಿದವರಿಗೆ ಮತ್ತು ಪ್ರೋತ್ಸಾಹಿಸಿದವರಿಗೆ ಕನಿಷ್ಠ ಒಂದು ವರ್ಷದಿಂದ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂ. ದಂಡವನ್ನು ವಿಧಿಸಬಹುದಾಗಿದೆ. ದಿನಾಂಕ: ಮಾ.3ರ, 2018ರಿಂದ ಎಲ್ಲಾ ಬಾಲ್ಯವಿವಾಹಗಳು ಅಸಿಂಧು ವಿವಾಹಗಳಾಗಿರುತ್ತವೆ ಎಂದರು.
ಗಂಗಾವತಿ ಶಿಶು ಅಭಿವೃದ್ದಿ ಯೋಜನಾಧಿಕಾರಿ ಜಯಶ್ರೀ ಅವರು ಮಾತನಾಡಿ, ಇಲಾಖೆಯಡಿ ಹದಿಹರೆಯದ ಕಿಶೋರಿಯವರಿಗೆ ಲಭ್ಯವಿರುವ ಯೋಜನೆಗಳ ಸದುಪಯೋಗ ಪಡೆದು, ಬಾಲಕಿಯರು ಬಾಲ್ಯವಿವಾಹಕ್ಕೆ ಒಳಗಾಗದಂತೆ ಸ್ವಯಂ ರಕ್ಷಣೆಯನ್ನು ಪಡೆದುಕೊಳ್ಳಲು ಸರ್ಕಾರದ ಬೆಂಬಲವನ್ನು ಪಡೆಯುವಂತೆ ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜಿಕಾ ಕಾರ್ಯಕರ್ತೆ ಪ್ರತಿಭಾ ಕಾಶಿಮಠ, ಶ್ರೀ ಕೊಟ್ಟೂರೇಶ್ವರ ಸಂಯುಕ್ತಾ ಪದವಿ ಪೂರ್ವ ಕಾಲೇಜಿನ ಪ್ರಾಶುಂಪಾಲರಾದ ರವಿ ಚೌಹಾಣ ಅವರು ಮತನಾಡಿದರು.
ಈ ಸಂದರ್ಭದಲ್ಲಿ ಕಲ್ಮಠ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಶುಂಪಾಲರಾದ ವೆಂಕನಗೌಡ, ಗಂಗಾವತಿಯ ಪಿಬಿಇ& ಆರ್.ಡಿ ಟ್ರಸ್ಟ್ ಅಧ್ಯಕ್ಷರಾದ ಮಲ್ಲಿಕಾರ್ಜುನಗೌಡ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಯಮನಮ್ಮ, ಕಾರ್ಯಕ್ರಮ ಸಂಯೋಜಕ ಶರಣಪ್ಪ ಸಿಂಗನಾಳ, ವಿಷಯ ನಿರ್ವಾಹಕಿ ಬಸವಣ್ಣೆಮ್ಮ, ಮಕ್ಕಳ ಸಹಾಯವಾಣಿ-1098 ಸಿಬ್ಬಂದಿಗಳು ಉಪಸ್ಥಿತರಿದ್ದರು.
ಭಾಗ್ಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಒಟ್ಟು 400 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ದತ್ತು ಮಾಸಾಚರಣೆಯ ಹಿನ್ನಲೆ ಕುರಿತು ದತ್ತು ಸಂಕಲ್ಪ ಸಂದೇಶವನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಬೋಧಿಸಿದರು.







